ಇಂಡಿಯನ್ ಪ್ರೀಮಿಯರ್ ಲೀಗ್ 2026ರ 40ನೇ ಪಂದ್ಯದಲ್ಲಿ ಇಂದು ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ಮತ್ತು ರಿಯಾನ್ ಪರಾಗ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಕ್ರಿಕೆಟ್ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಸೋಲಿಲ್ಲದ ಸರದಾರರು ಪಂಜಾಬ್ ಕಿಂಗ್ಸ್:
ಈ ಬಾರಿಯ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಅಜೇಯವಾಗಿ ಮುನ್ನುಗ್ಗುತ್ತಿದೆ. ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿರುವ ಶ್ರೇಯಸ್ ಪಡೆ, ಒಂದು ಪಂದ್ಯ ಮಳೆಗೆ ಆಹುತಿಯಾದ ಕಾರಣ ಒಟ್ಟು 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ರಾಜಾಧಿರಾಜನಂತೆ ಅಗ್ರಸ್ಥಾನದಲ್ಲಿದೆ. ಮುಶೀರ್ ಖಾನ್ ಮತ್ತು ಪ್ರಿಯಾಂಶ್ ಆರ್ಯ ಅವರಂತಹ ಯುವ ಆಟಗಾರರ ಸೇರ್ಪಡೆ ತಂಡಕ್ಕೆ ಆನೆಬಲ ತಂದಿದೆ.
ರಾಜಸ್ಥಾನ್ ರಾಯಲ್ಸ್ ಇತಿಹಾಸದ ಬಲ:
ಮುಖಾಮುಖಿ ಲೆಕ್ಕಾಚಾರದಲ್ಲಿ ರಾಜಸ್ಥಾನ್ ರಾಯಲ್ಸ್ ಮೇಲುಗೈ ಸಾಧಿಸಿದೆ. ಈವರೆಗೆ ನಡೆದ 30 ಪಂದ್ಯಗಳಲ್ಲಿ ಆರ್ಆರ್ 17 ಬಾರಿ ಗೆದ್ದಿದ್ದರೆ, ಪಂಜಾಬ್ 13 ಬಾರಿ ಜಯಿಸಿದೆ. ರಿಯಾನ್ ಪರಾಗ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ರಾಯಲ್ಸ್ ತಂಡದಲ್ಲಿ ಯಶಸ್ವಿ ಜೈಸ್ವಾಲ್, ಜೋಫ್ರಾ ಆರ್ಚರ್ ಮತ್ತು ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರಂತಹ ಸ್ಫೋಟಕ ಆಟಗಾರರಿದ್ದಾರೆ.
ಯುವ ದಾಂಡಿಗರ ಸಮರ:
ಇಂದಿನ ಪಂದ್ಯದಲ್ಲಿ ಪಂಜಾಬ್‌ನ ಪ್ರಿಯಾಂಶ್ ಆರ್ಯ ಮತ್ತು ರಾಜಸ್ಥಾನ್‌ನ 15 ವರ್ಷದ ವೈಭವ್ ಸೂರ್ಯವಂಶಿ ನಡುವಿನ ಬ್ಯಾಟಿಂಗ್ ಪೈಪೋಟಿ ವಿಶೇಷ ಆಕರ್ಷಣೆಯಾಗಲಿದೆ. ಮುಲ್ಲನ್‌ಪುರದ ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿರುವುದರಿಂದ ಹೈ-ಸ್ಕೋರಿಂಗ್ ಗೇಮ್ ನಿರೀಕ್ಷಿಸಬಹುದು.
