IPLನಲ್ಲಿ ಮುಂಬೈ ವಿರುದ್ಧ ಆರ್​​ಸಿಬಿ ಭರ್ಜರಿ ಗೆಲುವು!

Film 2025 04 08t085707.780

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆ ಬಾಲ್‌ವರೆಗೆ ರೋಮಾಂಚಕ ಗೆಲುವು ಸಾಧಿಸಿದೆ. ಕ್ಯಾಪ್ಟನ್ ರಜತ್ ಪಾಟಿದಾರ್ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಸಿಡಿಲಬ್ಬರ ಬ್ಯಾಟಿಂಗ್‌ನಿಂದ RCB 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಭರ್ಜರಿ ಜಯ ದಾಖಲಿಸಿದೆ.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. RCB ತಂಡದ ಓಪನರ್‌ಗಳಾದ ಫಿಲಿಪ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರಂಭಿಸಿದರು. ಆದರೆ, ಟ್ರೆಂಟ್ ಬೋಲ್ಟ್ ಬೌಲಿಂಗ್‌ನಲ್ಲಿ ಫಿಲಿಪ್ ಸಾಲ್ಟ್ 4 ರನ್‌ಗೆ ಕ್ಲೀನ್ ಬೋಲ್ಡ್ ಆದರು. ಆದರೂ, ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ ಅರ್ಧಶತಕ ಪೂರೈಸಿದರು. ಒಟ್ಟು 42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 67 ರನ್ ಗಳಿಸಿ ಔಟಾದರು.

ಕ್ಯಾಪ್ಟನ್ ರಜತ್ ಪಾಟಿದಾರ್ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 64 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಕನ್ನಡಿಗ ದೇವದತ್ ಪಡಿಕ್ಕಲ್ 22 ಎಸೆತಗಳಲ್ಲಿ 37 ರನ್ ಗಳಿಸಿದರೆ, ವಿಕೆಟ್ ಕೀಪರ್ ಜಿತೇಶ್ ಶರ್ಮಾ 40 ರನ್ ಬಾರಿಸಿದರು. ಇದರಿಂದ RCB 20 ಓವರ್‌ಗಳಲ್ಲಿ 5 ವಿಕೆಟ್‌ಗೆ 222 ರನ್‌ಗಳ ಗುರಿ ನೀಡಿತು.

ಮುಂಬೈ ತಂಡದ ಓಪನರ್‌ಗಳಾದ ರೋಹಿತ್ ಶರ್ಮಾ ಮತ್ತು ರಯಾನ್ ರಿಕೆಲ್ಟನ್ ತಲಾ 17 ರನ್ ಗಳಿಸಿ ಔಟಾದರು. ವಿಲ್ ಜಾಕ್ಸ್ 22 ರನ್‌ಗೆ ಕೊಹ್ಲಿಗೆ ಕ್ಯಾಚ್ ಕೊಟ್ಟು ವಿಫಲರಾದರು. ಸೂರ್ಯಕುಮಾರ್ ಯಾದವ್ 28 ರನ್ ಗಳಿಸುವಾಗ ಯಶ್ ದಯಾಳ್ ಬೌಲಿಂಗ್‌ನಲ್ಲಿ ಔಟಾದರು. ತಿಲಕ್ ವರ್ಮಾ 27 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 56 ರನ್ ಗಳಿಸಿ ಅರ್ಧಶತಕ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.

ನಾಯಕ ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ 4 ಸಿಕ್ಸರ್‌ಗಳೊಂದಿಗೆ 42 ರನ್ ಸಿಡಿಸಿ ಹೋರಾಟ ನಡೆಸಿದರೂ ಬೌಂಡರಿ ಲೈನ್ ಬಳಿ ಕ್ಯಾಚ್ ಕೊಟ್ಟು ಔಟಾದರು. ಮಿಚೆಲ್ ಸ್ಯಾಂಟ್ನರ್ ಮತ್ತು ದೀಪಕ್ ಚಹಾರ್ ಕೂಡ ಸಿಕ್ಸರ್ ಬಾರಿಸುವ ವೇಳೆ ಔಟಾದರು. ಕೊನೆ ಓವರ್‌ನಲ್ಲಿ 18 ರನ್ ಬೇಕಿದ್ದಾಗ, ನಮನ್ ಧೀರ್ ಬೌಂಡರಿ ಬಾರಿಸಿದರೂ ಮುಂದಿನ ಎಸೆತದಲ್ಲಿ ಔಟಾದರು. ಕೊನೆ ಬಾಲ್‌ಗೆ 13 ರನ್ ಅವಶ್ಯಕತೆ ಇದ್ದಿದ್ದರಿಂದ ಮುಂಬೈ ಸೋತು, RCBಗೆ ರೋಚಕ ಗೆಲುವು ಒಲಿದು ಬಂತು.

ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ RCB 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಜಯಭೇರಿ ಬಾರಿಸಿದೆ. ಕೊನೆ ಬಾಲ್‌ವರೆಗೆ ರೋಮಾಂಚನಕಾರಿಯಾಗಿದ್ದ ಈ ಪಂದ್ಯ ಮುಂಬೈಗೆ ಹಿನ್ನಡೆಯಾದರೆ, RCB ಫ್ಯಾನ್ಸ್‌ಗೆ ಸಂತಸ ತಂದಿದೆ.

Exit mobile version