IPL 2025: ಮುಂಬೈ ವಿರುದ್ಧ ಸೋತ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್‌ನಿಂದ ಔಟ್

Untitled design 2025 05 21t233232.829

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಪ್ಲೇಆಫ್‌ಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿತ್ತು. ಆದರೆ, ಮುಂಬೈ ಇಂಡಿಯನ್ಸ್‌ನ ಪ್ರದರ್ಶನದ ಮುಂದೆ ಡೆಲ್ಲಿ ಕ್ಯಾಪಿಟಲ್ಸ್ 60 ರನ್‌ಗಳಿಂದ ಸೋತು ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದಿದೆ. ಇದರೊಂದಿಗೆ ಮುಂಬೈ ತನ್ನ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

ಮುಂಬೈನ ಬೃಹತ್ ಗುರಿ
ಟಾಸ್ ಸೋತ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಸೂರ್ಯಕುಮಾರ್ ಯಾದವ್‌ರ ಆಕರ್ಷಕ ಅರ್ಧಶತಕದಿಂದಾಗಿ ಮುಂಬೈ 20 ಓವರ್‌ಗಳಲ್ಲಿ 180/5 ರನ್ ಗಳಿಸಿತ್ತು, ಡೆಲ್ಲಿಗೆ 181 ರನ್‌ಗಳ ಗುರಿಯನ್ನು ನೀಡಿತ್ತು. ಕೊನೆಯ 12 ಎಸೆತಗಳಲ್ಲಿ ಸೂರ್ಯಕುಮಾರ್ ಯಾದವ್ (43 ಎಸೆತಗಳಲ್ಲಿ 73* ರನ್, 7 ಬೌಂಡರಿ, 6 ಸಿಕ್ಸರ್) ಮತ್ತು ನಮನ್ ಧೀರ್ (8 ಎಸೆತಗಳಲ್ಲಿ 24* ರನ್, 2 ಬೌಂಡರಿ, 2 ಸಿಕ್ಸರ್) 48 ರನ್ ಕಲೆಹಾಕಿದರು.

ಆದರೆ, ಮುಂಬೈಗೆ ಆರಂಭಿಕ ಆಘಾತ ಎದುರಾಯಿತು. ಮಾಜಿ ನಾಯಕ ರೋಹಿತ್ ಶರ್ಮಾ ಕೇವಲ 5 ರನ್‌ಗೆ ಔಟಾದರು. ವಿಲ್ ಜ್ಯಾಕ್ಸ್ (21 ರನ್, 13 ಎಸೆತ) ಮತ್ತು ರಯಾನ್ ರಿಕಲ್ಟನ್ (25 ರನ್) ಕೆಲವು ರನ್‌ಗಳನ್ನು ಕಲೆಹಾಕಿದರೂ ದೊಡ್ಡ ಇನಿಂಗ್ಸ್‌ಗೆ ವಿಫಲರಾದರು. ತಿಲಕ್ ವರ್ಮಾ (27 ರನ್) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (3 ರನ್) ಕೂಡ ಬೇಗನೆ ವಿಕೆಟ್ ಕಳೆದುಕೊಂಡರು. ಡೆಲ್ಲಿ ಪರ ಮುಖೇಶ್ ಕುಮಾರ್ ಎರಡು ವಿಕೆಟ್‌ಗಳನ್ನು ಪಡೆದರೆ, ದುಷ್ಮಂತ ಚಮೀರ, ಮುಸ್ತಾಫಿಜುರ್ ರೆಹಮಾನ್, ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಕಿತ್ತರು.

ಡೆಲ್ಲಿಯ ಬ್ಯಾಟಿಂಗ್ ವೈಫಲ್ಯ
181 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರಂಭಿಕ ಆಘಾತ ಎದುರಾಯಿತು. ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿದ್ದ ಫಾಫ್ ಡುಪ್ಲೆಸಿಸ್ ಕೇವಲ 6 ರನ್‌ಗೆ ಔಟಾದರು. ಕಳೆದ ಪಂದ್ಯದ ಶತಕ ವೀರ ರಾಹುಲ್ 11 ರನ್‌ಗೆ ವಿಕೆಟ್ ಒಪ್ಪಿಸಿದರು. ಅಭಿಷೇಕ್ ಪೂರೆಲ್ (6 ರನ್) ಕೂಡ ನಿರಾಸೆ ಮೂಡಿಸಿದರು. ಸಮೀರ್ ರಿಜ್ವಿ ತಂಡದ ಪರ ಅತ್ಯಧಿಕ 39 ರನ್ ಗಳಿಸಿದರೂ, ಗೆಲುವಿಗೆ ಇದು ಸಾಕಾಗಲಿಲ್ಲ. ವಿಪ್ರಜ್ ನಿಗಮ್ (20 ರನ್) ಮತ್ತು ಅಶುತೋಶ್ ಶರ್ಮಾ (18 ರನ್) ಕೆಲವು ರನ್‌ಗಳನ್ನು ಕೂಡಿಸಿದರೂ, ತಂಡ ತನ್ನ ಗುರಿ ಮುಟ್ಟಲಿಲ್ಲ. ಬಾಲಂಗೋಚಿಗಳಾದ ಮುಖೇಶ್ ಕುಮಾರ್ ಮತ್ತು ಕುಲದೀಪ್ ಯಾದವ್ ಯಾವುದೇ ಪ್ರತಿರೋಧವನ್ನು ಒಡ್ಡಲಿಲ್ಲ, ಡೆಲ್ಲಿ 120 ರನ್‌ಗಳಿಗೆ ಆಲೌಟ್ ಆಯಿತು.

ಪ್ಲೇಆಫ್‌ಗೆ ಅರ್ಹ ತಂಡಗಳು
ಮುಂಬೈ ಇಂಡಿಯನ್ಸ್‌ನ ಈ ಗೆಲುವಿನೊಂದಿಗೆ ಐಪಿಎಲ್ 2025ರ ಪ್ಲೇಆಫ್‌ಗೆ ಅರ್ಹತೆ ಪಡೆದ ನಾಲ್ಕು ತಂಡಗಳು ಖಚಿತವಾಗಿವೆ. ಗುಜರಾತ್ ಟೈಟನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಪಂಜಾಬ್ ಕಿಂಗ್ಸ್, ಮತ್ತು ಮುಂಬೈ ಇಂಡಿಯನ್ಸ್ ನಾಕೌಟ್ ಸುತ್ತಿಗೆ ಪ್ರವೇಶಿಸಿವೆ.

Exit mobile version