SAFF ಚಾಂಪಿಯನ್ 2026: ಭಾರತೀಯ ಮಹಿಳಾ ಫುಟ್ಬಾಲ್ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ

Untitled design 2026 06 07T185516.827

ನವದೆಹಲಿ: ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (SAFF) ಮಹಿಳಾ ಚಾಂಪಿಯನ್‌ಶಿಪ್ ಆದ ಭಾರತೀಯ ಮಹಿಳಾ ಫುಟ್ಬಾಲ್ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದರು. ಅಲ್ಲದೇ ಈ ಐತಿಹಾಸಿಕ ಗೆಲುವು ದೇಶದ ಯುವಕರನ್ನು ಕ್ರೀಡೆಯತ್ತ ಆಕರ್ಷಿಸಲು ಸ್ಫೂರ್ತಿಯಾಗಲಿದೆ ಎಂದು ಅವರು ಆಶಿಸಿದ್ದಾರೆ. 

ಶನಿವಾರ ಗೋವಾದ ಪಂಡಿತ್ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ರೋಮಾಂಚನಕಾರಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಬಾಂಗ್ಲಾದೇಶವನ್ನು 3–1 ಗೋಲುಗಳ ಅಂತರದಿಂದ ಭಾರತ ಸೋಲಿಸಿದೆ. ಈ ಮೂಲಕ ಭಾರತವು ಏಳು ವರ್ಷಗಳ ಬಳಿಕ SAFF ಮಹಿಳಾ ಚಾಂಪಿಯನ್‌ಶಿಪ್‌ ಪ್ರಶಸ್ತಿಯನ್ನು ಮತ್ತೆ ಮುಡಿಗೇರಿಸಿಕೊಂಡಿದೆ. ಕೊನೆಯ ಬಾರಿಗೆ ಭಾರತ ಈ ಪ್ರಶಸ್ತಿಯನ್ನು 2019ರಲ್ಲಿ ಗೆದ್ದಿತ್ತು.

ಪಂದ್ಯದ ಉದ್ದಕ್ಕೂ ಭಾರತೀಯ ತಂಡ ಅತ್ಯಂತ ಆಕ್ರಮಣಕಾರಿ ಆಟವಾಡಿತು. ಭಾರತದ ಪರವಾಗಿ, ಪ್ಯಾರಿ ಕ್ಸಾಕ್ಸಾ ಅವರು 42ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಮೊದಲಾರ್ಧದ ಅಂತ್ಯದ ಹೊತ್ತಿಗೆ, ಇಂಜುರಿ ಸಮಯದಲ್ಲಿ (45+1) ರಿತು ಪೋರ್ನಾ ಚಕ್ಮಾ ಅವರು ಬಾಂಗ್ಲಾದೇಶದ ಪರವಾಗಿ ಸಮಬಲ ಗೋಲು ಗಳಿಸಿದರು. ಆದರೆ, ಎರಡನೇ ಅರ್ಧದ ಆರಂಭದಲ್ಲೇ ಸ್ಯಾನ್ಫಿಡಾ ನೊಂಗ್ರಮ್ (46ನೇ ನಿಮಿಷ) ಅವರು ಮಿಂಚಿನ ಗೋಲು ಬಾರಿಸಿದರು. ಅಂತಿಮ ಹಂತದಲ್ಲಿ ಲಿಂಡಾ ಕೋಮ್ ಸೆರ್ಟೊ (82ನೇ ನಿಮಿಷ) ಅವರು ಮೂರನೇ ಗೋಲು ಗಳಿಸಿ, ಭಾರತದ ಗೆಲುವನ್ನು ಖಚಿತಪಡಿಸಿದರು.

ಈ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು X (ಹಿಂದಿನ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿ, SAFF ಮಹಿಳಾ ಚಾಂಪಿಯನ್ಶಿಪ್ 2026 ಅನ್ನು ಗೆದ್ದ ಭಾರತೀಯ ಮಹಿಳಾ ಫುಟ್ಬಾಲ್ ತಂಡಕ್ಕೆ ಅಭಿನಂದನೆಗಳು. ಅವರು ಪಂದ್ಯಾವಳಿಯ ಮೂಲಕ ಅತ್ಯುತ್ತಮವಾದ ಪ್ರದರ್ಶನ ನೀಡಿದ್ದಾರೆ. ಈ ಗೆಲುವು ಮುಂಬರುವ ದಿನಗಳಲ್ಲಿ ಹೆಚ್ಚಿನ ಯುವಕರು ಫುಟ್ಬಾಲ್ ಆಡಲು ಪ್ರೋತ್ಸಾಹಿಸುತ್ತದೆ. ತಂಡದ ಭವಿಷ್ಯದ ಪ್ರಯತ್ನಗಳಿಗಾಗಿ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (AIFF) ಸಹ ತಂಡವನ್ನು ಹರ್ಷೋದ್ಗಾರದಿಂದ ಸ್ವಾಗತಿಸಿದೆ. ಕ್ರೀಡಾಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಂಡವನ್ನು ಅಭಿನಂದಿಸುತ್ತಿದ್ದಾರೆ. ಕೇರಳ, ಮಣಿಪುರ, ಹರಿಯಾಣ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಕ್ರೀಡಾ ಪ್ರಿಯರು ತಂಡದ ಸದಸ್ಯರಿಗೆ ಮನತುಂಬಿ ಶುಭ ಕೋರುತ್ತಿದ್ದಾರೆ.

Exit mobile version