ವಿಶ್ವ ಗೆದ್ದ ಭಾರತದ ವನಿತೆಯರು : ಏಕದಿನ ಕ್ರಿಕೆಟ್‌ನಲ್ಲೀಗ ಚಾಂಪಿಯನ್ನರು

Untitled design 2025 11 03t082254.770

ನವಿ ಮುಂಬೈ : ಭಾರತದ ಹುಡುಗಿಯರು ಈಗ ವಿಶ್ವ ಚಾಂಪಿಯನ್ನರು. ಹೌದು. ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಭಾರತದ ವನಿತೆಯರು ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ನವಿಮುಂಬೈನಲ್ಲಿ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ರೋಚಕ ಜಯ ದಾಖಲಿಸಿದ್ದಾರೆ. ಎರಡು ಬಾರಿ ಫೈನಲ್ ಪ್ರವೇಶಿಸಿ ವಿಶ್ವಕಪ್ ಗೆಲ್ಲದೇ ನಿರಾಸೆ ಅನುಭವಿಸಿದ್ದ ಭಾರತದ ಮಹಿಳಾ ತಂಡ ಕೊನೆಗೂ ಈ ಬಾರಿ ವಿಶ್ವಕಪ್ ಗೆ ಮುತ್ತಿಟ್ಟಿದೆ.

ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಬಿಗ್ ಫೈಟ್ ಮ್ಯಾಚ್‌ನಲ್ಲಿ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಟಾಸ್ ಸೋತು ಮೊದಲು ಬ್ಯಾಟ್ ಮಾಡಿತು. ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭವಾದ ಫೈನಲ್ ಪಂದ್ಯದಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 298 ರನ್ ಕಲೆಹಾಕಿತು. ಸ್ಮೃತಿ ಮಂದಾನಾ ಜೊತೆ ಇನ್ನಿಂಗ್ಸ್ ಆರಂಭಿಸಿದ ಶಫಾಲಿ ಶರ್ಮಾ 104ರನ್ ಗಳ ಜೊತೆಯಾಟವಾಡಿದರು. ಬಳಿಕ ಸ್ಮೃತಿ 45 ರನ್ ಗೆ ಔಟಾದರೂ ಕೂಡ ಶಫಾಲಿ ಮಾತ್ರ ತಮ್ಮ ಬಿರುಸಿನ ಆಟ ಪ್ರದರ್ಶಿಸಿದರು. 78 ಎಸೆತಗಳಲ್ಲಿ 87 ರನ್ ಸಿಡಿಸಿದ ಶಫಾಲಿ ವರ್ಮಾ ತಂಡದ ಮೊತ್ತ ಹಿಗ್ಗಿಸಿದರು. ಇನ್ನು ಸೆಮಿಫೈನಲ್‌ನಲ್ಲಿ ಸೆಂಚುರಿ ಬಾರಿಸಿದ ಜೆಮಿಮಾ ರೋಡ್ರಿಗ್ಸ್ 24 ರನ್ ಗಳಿಸಿದ್ರೆ, ನಾಯಕಿ ಹರ್ಮನ್ಪ್ರೀತ್ ಕೌರ್ 20, ದೀಪ್ತಿ ಶರ್ಮಾ 58 ರನ್, ರಿಚಾ ಘೋಷ್ 34 ರನ್ ಬಾರಿಸಿದರು.

ಇನ್ನು 299 ರನ್ ಟಾರ್ಗೆಟ್ ಪಡೆದು ಚೇಸಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾದ ಆರಂಭ ಕೂಡ ಚೆನ್ನಾಗಿಯೇ ಇತ್ತು. ನಾಯಕಿ ಲಾರ ವೊಲ್ವಾರ್ಟ್ ಅಮೋಘ ಆಟವಾಡಿ ಭರ್ಜರಿ ಶತಕ ಗಳಿಸಿದರು. 42ನೇ ಓವರ್ ವರೆಗೂ ಕ್ರೀಸ್‌ನಲ್ಲೇ ಇದ್ದು 98 ಎಸೆತಗಳಲ್ಲಿ 101 ರನ್ ಗಳಿಸಿ ಗೆಲ್ಲುವ ಸನಿಹಕ್ಕೆ ತಂದಿಟ್ಟರು. ಆದರೆ, ಭಾರತದ ವನಿತೆಯರ ಮ್ಯಾಜಿಕ್ ಮುಂದೆ ಹರಿಣಿಗಳ ಆಟ ನಡೆಯಲೇ ಇಲ್ಲ. ಕೊನೆಗೆ ದಕ್ಷಿಣ ಆಫ್ರಿಕಾ 45.3 ಓವರ್ ಗಳಲ್ಲಿ 246 ರನ್‌ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲೂ ಅಮೋಘ ಆಟ ಪ್ರದರ್ಶಿಸಿದ ದೀಪ್ತಿ ಶರ್ಮಾ 5 ವಿಕೆಟ್ ಕಿತ್ತರೆ, ಶಫಾಲಿ ವರ್ಮಾ 2 ವಿಕೆಟ್ ಪಡೆದು ಭಾರತದ ವಿಶ್ವ ಚಾಂಪಿಯನ್ ಆಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ಮಹಿಳಾ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗ: ಭರ್ಜರಿ ಜಯ ದಾಖಲಿಸಿತು. 13ನೇ ಮಹಿಳಾ ವಿಶ್ವಕಪ್ ಆವೃತ್ತಿಯಲ್ಲಿ ಭಾರತದ ವನಿತೆಯರು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

Exit mobile version