ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 15ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಆಗಸ್ಟ್ 23ರಂದು ಕೊಲಂಬೋದ ಎಸ್‌ಎಸ್‌ಸಿ ಮೈದಾನದಲ್ಲಿ ಜರುಗಲಿದೆ. ಈ ಸರಣಿ ಟೀಮ್ ಇಂಡಿಯಾಗೆ ಸಾಮಾನ್ಯ ದ್ವಿಪಕ್ಷೀಯ ಸರಣಿಯಲ್ಲ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪ್ರವೇಶದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
ಪ್ರಸ್ತುತ ಭಾರತ ತಂಡ WTC ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಒಟ್ಟು 18 ಪಂದ್ಯಗಳಲ್ಲಿ ಈಗಾಗಲೇ 9 ಪಂದ್ಯಗಳನ್ನು ಆಡಿರುವ ಭಾರತಕ್ಕೆ ಇನ್ನೂ 9 ಪಂದ್ಯಗಳು ಬಾಕಿಯಿವೆ. ಫೈನಲ್‌ಗೆ ನೇರ ಅರ್ಹತೆ ಪಡೆಯಬೇಕಾದರೆ ಈ ಉಳಿದ ಪಂದ್ಯಗಳಲ್ಲಿ ಕನಿಷ್ಠ 8ರಲ್ಲಿ ಜಯ ಸಾಧಿಸುವುದು ಬಹುತೇಕ ಅನಿವಾರ್ಯವಾಗಿದೆ.
ಭಾರತದ ಮುಂದಿನ ಸರಣಿಗಳು ಶ್ರೀಲಂಕಾ ವಿರುದ್ಧ 2 ಟೆಸ್ಟ್, ನ್ಯೂಝಿಲೆಂಡ್ ವಿರುದ್ಧ 2 ಟೆಸ್ಟ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 5 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿವೆ. ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾವನ್ನು ಹೋಲಿಸಿದರೆ ಶ್ರೀಲಂಕಾ ತುಸು ದುರ್ಬಲ ಎದುರಾಳಿಯಾಗಿದ್ದರೂ, ತವರಿನ ನೆಲದಲ್ಲಿ ಅವರನ್ನು ಲಘುವಾಗಿ ಪರಿಗಣಿಸುವಂತಿಲ್ಲ.
ಹೀಗಾಗಿ ಶ್ರೀಲಂಕಾ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವುದು ಭಾರತಕ್ಕೆ ಅತ್ಯಗತ್ಯ. ಒಂದು ವೇಳೆ ಸರಣಿ ಡ್ರಾ ಆದರೆ ಅಥವಾ 1-0 ಅಂತರದಲ್ಲಿ ಮಾತ್ರ ಗೆದ್ದರೆ ಅಮೂಲ್ಯವಾದ PCT ಅಂಕಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆಗ ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಹೆಚ್ಚಿನ ಗೆಲುವು ಸಾಧಿಸುವ ಒತ್ತಡ ಹೆಚ್ಚಾಗಲಿದೆ.
ಸತತ ಮೂರನೇ ಬಾರಿ WTC ಫೈನಲ್‌ಗೆ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಬೇಕಾದರೆ, ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ನಿರ್ಣಾಯಕ ಪ್ರದರ್ಶನ ನೀಡಲೇಬೇಕಾಗಿದೆ.
