ಕಟಕ್‌ನ ಬಾರಬತಿ ಕ್ರೀಡಾಂಗಣದಲ್ಲಿ ನಡೆದ ಭಾರತ–ದಕ್ಷಿಣ ಆಫ್ರಿಕಾ ಮೊದಲನೆಯ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾ 101 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಅರ್ಧಶತಕ ಮತ್ತು ಬೌಲರ್‌ಗಳ ಅಬ್ಬರದ ವಿಕೆಟ್ ಮಳೆ, ಈ ಜಯದಲ್ಲಿ ಪ್ರಮುಖ ಪಾತ್ರವಹಿಸಿತ್ತು. ಈ ಗೆಲುವಿನೊಂದಿಗೆ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ 1–0ಅಂತರದಲ್ಲಿ ಮುನ್ನಡೆ ಪಡೆದಿದೆ.
ಭಾರತದ ಬ್ಯಾಟಿಂಗ್-ಆರಂಭಿಕ ಆಘಾತ
ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಬಂದ ಭಾರತಕ್ಕೆ ಶುರುವಿನಿಂದಲೇ ಮುಖಭಂಗವಾಯಿತು. ಮೊದಲನೇ ಓವರ್‌ನಲ್ಲೇ ಶುಭಮನ್ ಗಿಲ್ ಬೌಂಡರಿ ಬಾರಿಸಿದ ತಕ್ಷಣವೇ ಲುಂಗಿ ಎನ್ಗಿಡಿ ಬಲೆಗೆ ಸಿಕ್ಕರು. ಮೂರನೇ ಓವರ್‌ನಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಅದೇ ಎನ್ಗಿಡಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಉತ್ತಮ ಫಾರ್ಮ್‌ನಲ್ಲಿ ಕಂಡುಬಂದಿದ್ದ ಅಭಿಷೇಕ್ ಶರ್ಮಾ (17) ಅವರನ್ನು ಲುಥೊ ಸಿಪಾಮ್ಲಾ ಔಟ್ ಮಾಡಿ ಹರಿಣ ಪಡೆ ಭಾರತಕ್ಕೆ ಮತ್ತೊಂದು ಆಘಾತ ನೀಡಿತ್ತು.
7 ಓವರ್‌ಗಳು ಮುಗಿಯುವಷ್ಟರಲ್ಲಿ ಭಾರತ 48/3ರ ಸ್ಥಿತಿಯಲ್ಲಿ ಸಿಲುಕಿತ್ತು. ಬಳಿಕ ಕ್ರಿಸ್‌ಗೆ ಬಂದ ತಿಲಕ್ ವರ್ಮಾ (26) ಮತ್ತು ಅಕ್ಷರ್ ಪಟೇಲ್ (23) 30 ರನ್‌ಗಳ ಮಹತ್ವದ ಜೊತೆಯಾಟ ನೀಡಿ ತಂಡವನ್ನು ಸ್ಥಿರಗೊಳಿಸಲು ಪ್ರಯತ್ನಿಸಿದರು. ಆದರೆ ಇವರಿಬ್ಬರನ್ನೂ ಕ್ರಮವಾಗಿ ಎನ್ಗಿಡಿ ಮತ್ತು ಸಿಪಾಮ್ಲಾ ವಿಕೆಟ್ ಪಡೆದ ನಂತರ ಭಾರತ ಮತ್ತೆ ಒತ್ತಡಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಭಾರತ 14 ಓವರ್‌ಗಳಿಗೆ 104/5ರ ಮೊತ್ತ ಕಲೆ ಹಾಕಿ ಹಿನ್ನಡೆಯಲ್ಲಿತ್ತು. 150ರ ಗಡಿ ದಾಟುವುದೂ ಕಷ್ಟ ಎಂಬ ಅನಿಸಿಕೆ ಹುಟ್ಟಿತ್ತು. ಆದರೆ ಇಲ್ಲಿಂದಲೇ ಹಾರ್ದಿಕ್ ಪಾಂಡ್ಯ ಪಂದ್ಯದ ದಿಕ್ಕನ್ನು ಬದಲಿಸಿದರು. ಕೇವಲ 28 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಆರು ಬೌಂಡರಿಗಳೊಂದಿಗೆ ಅಬ್ಬರದ ಅಜೇಯ 59 ರನ್‌ಗಳು ಭಾರತವನ್ನು ಮುನ್ನಡೆಸಿತ್ತು. ಜಿತೇಶ್ ಶರ್ಮಾ (10*) ಮತ್ತು ಶಿವಂ ದುಬೆ (11) ಕೊಡುಗೆ ನೀಡಿದ ಪರಿಣಾಮ ಭಾರತ ನಿಗದಿತ 20 ಓವರ್‌ಗಳಲ್ಲಿ 175/6ರ ಮೊತ್ತ ಕಲೆಹಾಕಿತ್ತು.
ಹರಿಣ ಪಡೆ ಪರ ಲುಂಗಿ ಎನ್ಗಿಡಿ ಮೂರು ವಿಕೆಟ್‌ಗಳನ್ನು ಪಡೆದರೆ, ಲುಥೊ ಸಿಪಾಮ್ಲಾ ಎರಡು ವಿಕೆಟ್ ಬೀಳಿಸಿದರು.
ಭಾರತ ಬೌಲಿಂಗ್
176ರ ಗುರಿಯನ್ನು ಹಿಂಬಾಲಿಸಲು ಬಂದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲೇ ಕುಸಿದುಬಿತ್ತು. ಮೊದಲನೇ ಎಸೆತದಲ್ಲೇ ಅರ್ಷದೀಪ್ ಸಿಂಗ್ ಕ್ವಿಂಟನ್ ಡಿ ಕಾಕ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿ ಭಾರೀ ಹೊಡೆತ ನೀಡಿದರು. ಎರಡನೇ ಓವರ್‌ನಲ್ಲಿ ಟ್ರಿಸ್ಟನ್ ಸ್ಟಬ್ಸ್ ವಿಕೆಟ್ ಪಡೆದರು.
ಇದರ ನಂತರ ಬಂದ ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಅವರು ಅಬ್ಬರದ ಬೌಲಿಂಗ್ ಮುಂದುವರಿಸಿದರು. ಇವರಲ್ಲಿ ಪ್ರತಿಯೊಬ್ಬರೂ ತಲಾ 2 ವಿಕೆಟ್ ಪಡೆದು ಸೌತ್ ಆಫ್ರಿಕಾ ಬ್ಯಾಟಿಂಗ್ ಕ್ರಮವನ್ನು ಸಂಪೂರ್ಣವಾಗಿ ಕಸಿದುಕೊಂಡರು. ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಡೆವಾಲ್ಡ್ ಬ್ರೆವಿಸ್ ಮಾತ್ರ 22 ರನ್‌ಗಳನ್ನು ಗಳಿಸಿ ಸ್ವಲ್ಪ ಪ್ರತಿರೋಧ ತೋರಿದರೂ, ಇತರ ಯಾವುದೇ ಬ್ಯಾಟರ್ 20ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಸಂಪೂರ್ಣ ತಂಡ 12.3 ಓವರ್‌ಗಳಲ್ಲೇ 74 ರನ್‌ಗಳಿಗೆ ಆಲ್‌ಔಟ್ ಆಯಿತು.
