ಭಾರತ ಅಂಡರ್-19 ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ಅಂಡರ್-19 ತಂಡದ ವಿರುದ್ಧ ಬುಧವಾರ ನಡೆದ ಮೂರನೇ ಯೂತ್ ಏಕದಿನ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಕೇವಲ 14 ವರ್ಷದ ನಾಯಕ ವೈಭವ್ ಸೂರ್ಯವಂಶಿ ಮತ್ತು ಆರಂಭಿಕ ಆಟಗಾರ ಆ್ಯರನ್ ಜಾರ್ಜ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಕ್ರಿಕೆಟ್ ಲೋಕದ ಗಮನ ಸೆಳೆದಿದೆ. ಮೊದಲ ವಿಕೆಟ್‌ಗೆ 227 ರನ್‌ಗಳ ಭರ್ಜರಿ ಜೊತೆಯಾಟ ನಡೆಸುವ ಮೂಲಕ ಈ ಜೋಡಿ ಯೂತ್ ಏಕದಿನ ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದೆ.
ವಿಲ್ಲೋಮೂರ್ ಪಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್ ಆಯ್ದುಕೊಂಡಿತ್ತು.. ಭಾರತದ ಆರಂಭಿಕ ಜೋಡಿ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿ ಪ್ರೋಟಿಯಸ್ ಬೌಲರ್‌ಗಳನ್ನು ಸಂಪೂರ್ಣವಾಗಿ ನಲುಗಿಸಿದರು. ಕೇವಲ 9ನೇ ಓವರ್‌ನಲ್ಲೇ ಭಾರತ ತಂಡ 100 ರನ್‌ಗಳ ಗಡಿ ದಾಟಿದ್ದು, ಪಂದ್ಯದ ದಿಕ್ಕು ಸಂಪೂರ್ಣವಾಗಿ ಬದಲಾಗುವಂತೆ ಮಾಡಿತ್ತು.
ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ನಾಯಕತ್ವದ ಹೊಣೆ ಹೊತ್ತಿದ್ದರು. ನಿಯಮಿತ ನಾಯಕ ಆಯುಷ್ ಮ್ಹಾತ್ರೆ ಅನುಪಸ್ಥಿತಿಯಲ್ಲಿದ್ದ ಕಾರಣ ತಂಡವನ್ನು ಮುನ್ನಡೆಸಿದ ಸೂರ್ಯವಂಶಿ, ನಾಯಕನಾಗಿ ಮಾತ್ರವಲ್ಲದೆ ಪ್ರಮುಖ ಬ್ಯಾಟರ್ ಆಗಿಯೂ ಮಿಂಚಿದರು. ಕೇವಲ 14ನೇ ವಯಸ್ಸಿನಲ್ಲಿ ಶತಕ ಬಾರಿಸುವ ಮೂಲಕ, ಯೂತ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ವೈಭವ್ ಸೂರ್ಯವಂಶಿ 73 ಎಸೆತಗಳಲ್ಲಿ 127 ರನ್‌ಗಳ ಅಸಾಧಾರಣ ಇನಿಂಗ್ಸ್ ಆಡಿದರು. ಅವರ ಬ್ಯಾಟಿಂಗ್‌ನಲ್ಲಿ 9 ಬೌಂಡರಿಗಳು ಮತ್ತು 10 ಎತ್ತರದ ಸಿಕ್ಸರ್‌ಗಳು ಸೇರಿದ್ದವು. 173.97ರ ಸ್ಟ್ರೈಕ್ ರೇಟ್ ಅವರ ಆಕ್ರಮಣಕಾರಿ ಆಟಕ್ಕೆ ಸಾಕ್ಷಿಯಾಗಿತ್ತು. 26ನೇ ಓವರ್‌ನಲ್ಲಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಕ್ಯಾಚ್ ನೀಡಿ ಔಟ್ ಆದರೂ, ಅವರು ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದ್ದರು.
ಇನ್ನು, ಮತ್ತೊಬ್ಬ ಆರಂಭಿಕ ಆಟಗಾರ ಆ್ಯರನ್ ಜಾರ್ಜ್ ಕೂಡ ಸೂರ್ಯವಂಶಿಗೆ ಸಮಾನವಾಗಿ ಮಿಂಚಿದರು. 29ನೇ ಓವರ್‌ನಲ್ಲಿ ಶತಕ ಪೂರೈಸಿದ ಜಾರ್ಜ್, ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದರು. ಇವರಿಬ್ಬರ ಜೊತೆಯಾಟ 2013ರಲ್ಲಿ ಅಂಕುಶ್ ಬೈನ್ಸ್ ಮತ್ತು ಅಖಿಲ್ ಹೆರ್ವಾಡ್ಕರ್ ಅವರು ಸ್ಥಾಪಿಸಿದ್ದ 218 ರನ್‌ಗಳ ಹಿಂದಿನ ಭಾರತೀಯ ಯೂತ್ ODI ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿತ್ತು.
ವೈಭವ್ ಸೂರ್ಯವಂಶಿ ಅವರ ಕ್ರಿಕೆಟ್ ಪ್ರಯಾಣ ದಿನದಿಂದ ದಿನಕ್ಕೆ ಇನ್ನಷ್ಟು ರೋಚಕವಾಗುತ್ತಿದೆ. 2026ರ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಯೂತ್ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಫಿಫ್ಟಿ ದಾಖಲೆಯನ್ನು ಸರಿಗಟ್ಟಿದ್ದರು. ಈ ದಾಖಲೆ ಮೊದಲು ರಿಷಭ್ ಪಂತ್ ಹೆಸರಿನಲ್ಲಿ ಇತ್ತು. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ ಕೇವಲ 52 ಎಸೆತಗಳಲ್ಲಿ ಶತಕ ಬಾರಿಸಿ ಅಂಡರ್-19 ಮಟ್ಟದಲ್ಲಿ ಅತ್ಯಂತ ವೇಗದ ಶತಕದ ದಾಖಲೆಗೂ ಸಹಿ ಹಾಕಿದ್ದರು.
ಮುಂದಿನ ವಾರ ನಡೆಯಲಿರುವ ಅಂಡರ್-19 ವಿಶ್ವಕಪ್‌ಗೆ ಮುನ್ನ ಈ ಭರ್ಜರಿ ಜಯ ಮತ್ತು ದಾಖಲೆ ಭಾರತ ತಂಡಕ್ಕೆ ದೊಡ್ಡ ಆತ್ಮವಿಶ್ವಾಸ ನೀಡಿದೆ.
