IND vs ENG: ಒಂದೇ ಕೈಯಲ್ಲಿ ಬ್ಯಾಟಿಂಗ್‌ ಮಾಡಲು ಬಂದ ಇಂಗ್ಲೆಂಡ್‌ನ ರಿಯಲ್ ಹೀರೋ..!

222 (13)

ಲಂಡನ್‌: ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ನಡುವೆ ನಡೆದ 5ನೇ ಟೆಸ್ಟ್‌ ಪಂದ್ಯದ ಕೊನೆಯ ದಿನ ಅತ್ಯಂತ ರೋಮಾಂಚಕವಾಗಿತ್ತು. ಮೊಹಮ್ಮದ್ ಸಿರಾಜ್‌ನ ಅದ್ಭುತ ಬೌಲಿಂಗ್‌ ಪ್ರದರ್ಶನದಿಂದ ಭಾರತ ಕೇವಲ 6 ರನ್‌ಗಳಅತಿ ಸಣ್ಣ ವ್ಯತ್ಯಾಸದಿಂದ ಗೆಲುವು ಸಾಧಿಸಿತು. ಆದರೂ, ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್‌ ಎಲ್ಲರ ಗಮನ ಮತ್ತು ಮೆಚ್ಚುಗೆಗೆ ಪಾತ್ರರಾದರು.ಗಾಯಗೊಂಡಿದ್ದರೂ, ಒಂದೇ ಕೈಯಲ್ಲಿ ಬ್ಯಾಟಿಂಗ್‌ಗೆ ಇಳಿದ ಅವರು, ಕ್ರಿಕೆಟ್‌ ಅಭಿಮಾನಿಗಳ ಹೃದಯ ಗೆದ್ದರು.

ಪಂದ್ಯದ ಕೊನೆಯ ದಿನವಾದ ಸೋಮವಾರ, ಇಂಗ್ಲೆಂಡ್‌ ತಂಡಕ್ಕೆ ಗೆಲುವಿಗೆ ಕೇವಲ 35 ರನ್‌ಗಳ ಅಗತ್ಯವಿತ್ತು. ಆದರೆ ಭಾರತಕ್ಕೆ 4 ವಿಕೆಟ್‌ಗಳನ್ನು ಕಿತ್ತುಕೊಳ್ಳಬೇಕಿತ್ತು. ಇಂಗ್ಲೆಂಡ್‌ ತಂಡದ ಜೇಮಿ ಸ್ಮಿತ್‌ ಮತ್ತು ಜೇಮಿ ಓವರ್ಟನ್‌ ಕ್ರೀಸ್‌ನಲ್ಲಿದ್ದರು. ಎಲ್ಲರೂ ಇಂಗ್ಲೆಂಡ್‌ ಸುಲಭವಾಗಿ ಗೆಲ್ಲಬಹುದೆಂದು ಭಾವಿಸಿದ್ದರು. ಆದರೆ, ಮೊಹಮ್ಮದ್‌ ಸಿರಾಜ್‌ ಮತ್ತು ಪ್ರಸಿಧ್‌ ಕೃಷ್ಣ ಅವರ ಬೌಲಿಂಗ್‌ ದಾಳಿಯಿಂದಾಗಿ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಒತ್ತಡಕ್ಕೆ ಸಿಲುಕಿದರು. 78ನೇ ಓವರ್‌ನಲ್ಲಿ ಸಿರಾಜ್‌, ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಜೇಮಿ ಸ್ಮಿತ್‌ ಅವರನ್ನು ಔಟ್‌ ಮಾಡಿದರು. ಇದಾದ ಬಳಿಕ 80ನೇ ಓವರ್‌ನಲ್ಲಿ ಜೇಮಿ ಓವರ್ಟನ್‌ ಅವರನ್ನು ಎಲ್‌ಬಿಡಬ್ಲ್ಯು ಮೂಲಕ ಪೆವಿಲಿಯನ್‌ಗೆ ಕಳುಹಿಸಿದರು. ನಂತರ, ಕನ್ನಡಿಗ ಪ್ರಸಿಧ್‌ ಕೃಷ್ಣ ಜಾಶ್‌ ಟಾಂಗ್‌ ಅವರ ವಿಕೆಟ್‌ ಕಿತ್ತರು.

ಈ ಸಂದರ್ಭದಲ್ಲಿ ಕ್ರಿಸ್‌ ವೋಕ್ಸ್‌, ಗಾಯಗೊಂಡಿದ್ದರೂ ಕ್ರೀಸ್‌ಗೆ ಬಂದರು. ಒಂದು ಕೈಯನ್ನು ಜೆರ್ಸಿಯೊಳಗೆ ಇರಿಸಿಕೊಂಡು, ಒಂದೇ ಕೈಯಲ್ಲಿ ಬ್ಯಾಟ್‌ ಹಿಡಿದು ಆಡುವ ಸಾಹಸಕ್ಕೆ ಕೈಹಾಕಿದರು. ಅವರು ಕ್ರೀಸ್‌ಗೆ ಬರುತ್ತಿದ್ದಂತೆ, ಗ್ಯಾಲರಿಯಲ್ಲಿ ಕುಳಿತಿದ್ದ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸೂಚಿಸಿದರು. ವೋಕ್ಸ್‌ ಅವರ ಈ ಧೈರ್ಯದ ನಡೆ ಕ್ರಿಕೆಟ್‌ ಜಗತ್ತಿನಲ್ಲಿ ಒಂದು ಐತಿಹಾಸಿಕ ಕ್ಷಣವಾಯಿತು. ಇಂಗ್ಲೆಂಡ್‌ಗೆ ಕೇವಲ 17 ರನ್‌ಗಳ ಅಗತ್ಯವಿತ್ತು. ಅಟ್ಕಿನ್ಸನ್‌ ಒಂದು ಸಿಕ್ಸರ್‌ ಬಾರಿಸಿ ಗೆಲುವಿನ ಆಸೆಯನ್ನು ಚಿಗುರಿಸಿದರು. ಆದರೆ, ಮೊಹಮ್ಮದ್‌ ಸಿರಾಜ್‌ ತಮ್ಮ ಯಾರ್ಕರ್‌ ಮೂಲಕ ಅಟ್ಕಿನ್ಸನ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ಇದರೊಂದಿಗೆ ಭಾರತ ತಂಡ ರೋಚಕ 6 ರನ್‌ ಗೆಲುವು ಸಾಧಿಸಿತ್ತು.

Exit mobile version