IND vs NZ: ಸೋಲಿನ ಸುಳಿಗೆ ಸಿಲುಕಿದ್ದ ಭಾರತಕ್ಕೆ ಗೆಲುವು: ಕಿವೀಸ್‌ಗೆ ಶಾಕ್ ಕೊಟ್ಟ ಮಳೆರಾಯ

Your paragraph text 2026 11 07T162617.464

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ರೋಚಕ ಗೆಲುವು ದಾಖಲಿಸಿದೆ. ಒಂದು ಹಂತದಲ್ಲಿ ಸೋಲಿನ ದವಡೆಗೆ ಸಿಲುಕಿದ್ದ ಟೀಮ್ ಇಂಡಿಯಾವನ್ನು ಕೊನೆಗೆ ಮಳೆರಾಯ ಕೈಹಿಡಿದಿದ್ದಾನೆ. ಗುರ್ನೂರ್ ಬ್ರಾರ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ನ್ಯೂಜಿಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ್ದ ಭಾರತ, ಬ್ಯಾಟಿಂಗ್‌ನಲ್ಲಿ ಮಾತ್ರ ಪರದಾಡಿತು. ಆದರೆ, ಕೊನೆಯ ಹಂತದಲ್ಲಿ ಸುರಿದ ಮಳೆಯಿಂದಾಗಿ ಡಿಎಲ್‌ಎಸ್ (DLS) ನಿಯಮದಡಿ ಭಾರತಕ್ಕೆ 4 ರನ್‌ಗಳ ಜಯ ಒಲಿಯಿತು.

ಈ ಗೆಲುವಿನೊಂದಿಗೆ ಭಾರತ ತಂಡ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಆತಿಥೇಯ ನ್ಯೂಜಿಲೆಂಡ್ ತಂಡಕ್ಕೆ ತವರಿನಲ್ಲೇ ಮುಖಭಂಗವಾಗಿದೆ. ನಾಲ್ಕು ವಿಕೆಟ್ ಕಬಳಿಸಿ ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಗುರ್ನೂರ್ ಬ್ರಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಭಾರತಕ್ಕೆ 135 ರನ್‌ಗಳ ಗುರಿ ನೀಡಿದ ಕಿವೀಸ್

ವೆಲ್ಲಿಂಗ್ಟನ್‌ನ ಹೆನ್ರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಪ್ರತಿಕೂಲ ಹವಾಮಾನದ ಹಿನ್ನೆಲೆ ಟಾಸ್ ಪ್ರಕ್ರಿಯೆ ತಡವಾಗಿ ನಡೆದಿತ್ತು. ಹೀಗಾಗಿ ಪಂದ್ಯವನ್ನು 47 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು.

ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಭಾರತದ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಆಕಿಬ್ ನಬಿ ತಮ್ಮ ನಿಖರ ದಾಳಿಯ ಮೂಲಕ ಟಿಮ್ ಸೈಫರ್ಟ್ ಹಾಗೂ ವಿಲ್ ಯಂಗ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ನಂತರ ಅನ್ಶುಲ್ ಕಾಂಬೋಜ್ ಅವರು ಹೆನ್ರಿ ನಿಕೋಲ್ಸ್ ವಿಕೆಟ್ ಕಬಳಿಸಿದರು.

ಇದರೊಂದಿಗೆ ನ್ಯೂಜಿಲೆಂಡ್ ತಂಡ ಕೇವಲ 23 ರನ್‌ಗಳಿಗೆ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಗುರ್ನೂರ್ ಬ್ರಾರ್ ಅಬ್ಬರಕ್ಕೆ ತತ್ತರಿಸಿದ ಕಿವೀಸ್

ಆರಂಭಿಕ ಹಂತದಲ್ಲಿ ಆಕಿಬ್ ನಬಿ ಎದುರಾಳಿ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರೆ, ಮಧ್ಯಮ ಕ್ರಮಾಂಕದಲ್ಲಿ ಗುರ್ನೂರ್ ಬ್ರಾರ್ ತಮ್ಮ ಬೌಲಿಂಗ್ ಮೂಲಕ ಕಿವೀಸ್ ತಂಡಕ್ಕೆ ದೊಡ್ಡ ಹೊಡೆತ ನೀಡಿದರು.

ಮೋಡ ಕವಿದ ವಾತಾವರಣ ಮತ್ತು ಪಿಚ್‌ನಲ್ಲಿದ್ದ ನೆರವನ್ನು ಸಮರ್ಥವಾಗಿ ಬಳಸಿಕೊಂಡ ಬ್ರಾರ್, ಟಾಮ್ ಲೇಥಮ್, ಗ್ಲೆನ್ ಫಿಲಿಪ್ಸ್ ಹಾಗೂ ಮಿಚೆಲ್ ಸ್ಯಾಂಟ್ನರ್ ಸೇರಿದಂತೆ ಪ್ರಮುಖ ಬ್ಯಾಟರ್‌ಗಳನ್ನು ಔಟ್ ಮಾಡಿದರು. ಒಟ್ಟಾರೆ 10 ಓವರ್‌ಗಳಲ್ಲಿ ಕೇವಲ 30 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದರು.

ಆದರೆ, ಮತ್ತೊಂದೆಡೆ ಡ್ಯಾರಿಲ್ ಮಿಚೆಲ್ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ತಂಡಕ್ಕೆ ಆಸರೆಯಾದರು. ಅವರು 104 ಎಸೆತಗಳಲ್ಲಿ 55 ರನ್ ಗಳಿಸಿ ಅರ್ಧಶತಕ ದಾಖಲಿಸಿದರು. ನಾಯಕ ಮಿಚೆಲ್ ಸ್ಯಾಂಟ್ನರ್ 38 ಎಸೆತಗಳಲ್ಲಿ 31 ರನ್ ಗಳಿಸಿದರು. ಈ ಇಬ್ಬರು ಬ್ಯಾಟರ್‌ಗಳು 59 ರನ್‌ಗಳ ಉಪಯುಕ್ತ ಜೊತೆಯಾಟವಾಡುವ ಮೂಲಕ ತಂಡದ ಮೊತ್ತ ಹೆಚ್ಚಿಸಿದರು.

ಭಾರತದ ಪರ ಆಕಿಬ್ ನಬಿ, ಅನ್ಶುಲ್ ಕಾಂಬೋಜ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಅಂತಿಮವಾಗಿ ನ್ಯೂಜಿಲೆಂಡ್ ತಂಡ 135 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.

ಬ್ಯಾಟಿಂಗ್‌ನಲ್ಲಿ ಕುಸಿದ ಟೀಮ್ ಇಂಡಿಯಾ

135 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಸುಲಭವಾಗಿ ಗೆಲುವು ಸಾಧಿಸಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ನ್ಯೂಜಿಲೆಂಡ್ ಬೌಲರ್‌ಗಳು ಭಾರತದ ಬ್ಯಾಟರ್‌ಗಳಿಗೆ ಕಠಿಣ ಸವಾಲೊಡ್ಡಿದರು.

ಆರಂಭಿಕ ಆಘಾತ ಎದುರಿಸಿದ ಭಾರತಕ್ಕೆ ನಾಯಕ ಶುಭಮನ್ ಗಿಲ್ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದ್ದು ದೊಡ್ಡ ಹಿನ್ನಡೆಯಾಯಿತು. ವಿರಾಟ್ ಕೊಹ್ಲಿ ಹಾಗೂ ಅಕ್ಷರ್ ಪಟೇಲ್ ತಲಾ 7 ರನ್ ಗಳಿಸಿ ಔಟಾದರು. ರೋಹಿತ್ ಶರ್ಮಾ 23 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 30 ರನ್‌ಗಳ ಕೊಡುಗೆ ನೀಡಿದರು.

ಆದರೂ ನ್ಯೂಜಿಲೆಂಡ್ ಬೌಲರ್‌ಗಳ ದಾಳಿಗೆ ಭಾರತ ತಂಡದ ಮಧ್ಯಮ ಕ್ರಮಾಂಕ ಸಂಪೂರ್ಣವಾಗಿ ಕುಸಿಯಿತು. ಒಂದು ಹಂತದಲ್ಲಿ 111 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿತು. ಕೆಎಲ್ ರಾಹುಲ್ ಮಾತ್ರ ಜವಾಬ್ದಾರಿಯುತ ಆಟವಾಡಿ ಅಜೇಯ 26 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಕೊನೆಯಲ್ಲಿ ಮಳೆರಾಯನ ಎಂಟ್ರಿ; ಭಾರತಕ್ಕೆ ಗೆಲುವು!

ಭಾರತ ತಂಡ 26 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದ್ದ ಸಂದರ್ಭದಲ್ಲಿ ಮಳೆ ಆರಂಭವಾಯಿತು. ಪಂದ್ಯವನ್ನು ಮುಂದುವರಿಸಲು ಸಾಧ್ಯವಾಗದ ಕಾರಣ ಆಟವನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಮಳೆ ನಿಲ್ಲದ ಹಿನ್ನೆಲೆ ಅಂಪೈರ್‌ಗಳು ಡಿಎಲ್‌ಎಸ್ ನಿಯಮದ ಮೊರೆ ಹೋದರು.

ಡಿಎಲ್‌ಎಸ್ ಲೆಕ್ಕಾಚಾರದ ಪ್ರಕಾರ ಭಾರತ ತಂಡ ನ್ಯೂಜಿಲೆಂಡ್‌ಗಿಂತ ನಾಲ್ಕು ರನ್‌ಗಳ ಮುನ್ನಡೆ ಹೊಂದಿತ್ತು. ಹೀಗಾಗಿ ಭಾರತಕ್ಕೆ ನಾಲ್ಕು ರನ್‌ಗಳ ರೋಚಕ ಗೆಲುವು ಘೋಷಿಸಲಾಯಿತು.

Exit mobile version