ಐಪಿಎಲ್ 2026ರ 39ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ರಜತ್ ಪಾಟಿದರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಏಪ್ರಿಲ್ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಮುಖಾಮುಖಿಯಲ್ಲಿ ಡೆಲ್ಲಿ ತಂಡವು ಆರ್ಸಿಬಿಯನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು. ತನ್ನ ತವರಿನಲ್ಲಿ ಅನುಭವಿಸಿದ ಆ ಸೋಲಿಗೆ ಡೆಲ್ಲಿಯಲ್ಲೇ ತಿರುಗೇಟು ನೀಡಲು ಆರ್ಸಿಬಿ ಸಜ್ಜಾಗಿದೆ. ವಿಶೇಷವೆಂದರೆ, ಆರ್ಸಿಬಿ ತಂಡವು ಆಡುವ ಹನ್ನೊಂದರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡದೆ ಹಳೆಯ ವಿಜಯೀ ತಂಡವನ್ನೇ ಉಳಿಸಿಕೊಂಡಿದೆ. ಆದರೆ, ಡೆಲ್ಲಿ ತಂಡವು ಈ ಪಂದ್ಯಕ್ಕಾಗಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿದೆ.
ಪಾಯಿಂಟ್ಸ್ ಪಟ್ಟಿಯಲ್ಲಿ ಯಾರ ಸ್ಥಾನ ಎಲ್ಲಿ?
ಪ್ರಸ್ತುತ ಸೀಸನ್‌ನಲ್ಲಿ ಆರ್ಸಿಬಿ ಅಮೋಘ ಪ್ರದರ್ಶನ ನೀಡುತ್ತಿದ್ದು, ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ 7 ಪಂದ್ಯಗಳಲ್ಲಿ ಕೇವಲ 3 ಗೆಲುವಿನೊಂದಿಗೆ 7ನೇ ಸ್ಥಾನದಲ್ಲಿದ್ದು, ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲು ಈ ಪಂದ್ಯ ಅವರಿಗೆ ಅತ್ಯಂತ ನಿರ್ಣಾಯಕವಾಗಿದೆ.
ಮುಖಾಮುಖಿ ದಾಖಲೆ
ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಆರ್ಸಿಬಿ ತಂಡದ್ದೇ ಮೇಲುಗೈ ಕಂಡುಬರುತ್ತಿದೆ. ಉಭಯ ತಂಡಗಳು ಒಟ್ಟು 34 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಬೆಂಗಳೂರು 20 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಡೆಲ್ಲಿ ತಂಡವು ಕೇವಲ 13 ಪಂದ್ಯಗಳಲ್ಲಿ ಗೆದ್ದಿದೆ.
