ರಾಜಸ್ಥಾನ ರಾಯಲ್ಸ್ ಬೌಲಿಂಗ್‌ಗೆ ತತ್ತರಿಸಿದ CSK: 8 ಬ್ಯಾಟರ್‌ಗಳು ಒಂದಂಕಿಗೆ ಔಟ್ !

Untitled design 2026 03 30T222804.918

ಗುವಾಹಟಿ: ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ರಾಜಸ್ಥಾನ ರಾಯಲ್ಸ್ (RR) ವಿರುದ್ಧ ಬ್ಯಾಟಿಂಗ್‌ನಲ್ಲಿ ಮಂಕಾಗಿದೆ. ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಸಿಎಸ್‌ಕೆ ತಂಡವು ಕೇವಲ 127 ರನ್‌ಗಳಿಗೆ ಆಲೌಟ್ ಆಗುವ ಮೂಲಕ ತನ್ನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ರಾಜಸ್ಥಾನ ರಾಯಲ್ಸ್ ಬೌಲರ್‌ಗಳ ದಾಳಿಗೆ ಉತ್ತರ ನೀಡಲಾಗದೆ ಸಿಎಸ್‌ಕೆ ಬ್ಯಾಟರ್‌ಗಳು ತತ್ತರಿಸಿ ಹೋಗಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಇಳಿದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ಪವರ್‌ಪ್ಲೇ ಮುಗಿಯುವಷ್ಟರಲ್ಲೇ ತಂಡವು ತನ್ನ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 41 ರನ್ ಗಳಿಸಿತ್ತು. ಆರಂಭಿಕರಾದ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಸಂಜು ಸ್ಯಾಮ್ಸನ್ ಜೋಡಿ ಈ ಬಾರಿ ತಂಡಕ್ಕೆ ನೆರವಾಗಲಿಲ್ಲ. ಸಂಜು ಸ್ಯಾಮ್ಸನ್ ಕೇವಲ 6 ರನ್‌ಗಳಿಗೆ ಔಟಾದರೆ, ಬೆನ್ನಲ್ಲೇ ರುತುರಾಜ್ ಗಾಯಕ್ವಾಡ್ ಕೂಡ 6 ರನ್‌ಗಳಿಗೆ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು.

ಮತ್ತೊಂದು ವಿಚಿತ್ರ ವಿಷಯವೆಂದರೆ, ಸಿಎಸ್‌ಕೆ ಇನ್ನಿಂಗ್ಸ್‌ನಲ್ಲಿ ತಂಡದ ಬರೋಬ್ಬರಿ 8 ಬ್ಯಾಟರ್‌ಗಳು ಎರಡಂಕಿ ಮೊತ್ತವನ್ನು ತಲುಪಲು ಸಾಧ್ಯವಾಗಲಿಲ್ಲ. ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಶೂನ್ಯಕ್ಕೆ ಔಟಾದರೆ, ಮ್ಯಾಟ್ ಶಾರ್ಟ್ (2) ಮತ್ತು ಶಿವಂ ದುಬೆ (6) ಕೂಡ ನಿರಾಸೆ ಮೂಡಿಸಿದರು.

ತಂಡವು 100 ರನ್ ಗಡಿ ದಾಟುವುದು ಅನುಮಾನ ಎನ್ನುವ ಸಂದರ್ಭದಲ್ಲಿ 8ನೇ ಕ್ರಮಾಂಕದಲ್ಲಿ ಬಂದ ಜೆಮಿ ಓವರ್ಟನ್ ಅದ್ಭುತವಾಗಿ  ಆಟವಾಡಿದರು. ಅಂತಿಮ ಹಂತದಲ್ಲಿ 42 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದ ಓವರ್ಟನ್, ಸಿಎಸ್‌ಕೆ ತಂಡವು ಗೌರವಯುತ ಮೊತ್ತ ತಲುಪಲು ಕಾರಣರಾದರು. ಇವರಿಗೆ ಕಾರ್ತಿಕ್ ಶರ್ಮಾ (18) ಸ್ವಲ್ಪ ಮಟ್ಟಿನ ಸಾಥ್ ನೀಡಿದರು. ಈ ಇಬ್ಬರ ಹೋರಾಟವಿಲ್ಲದಿದ್ದರೆ ಸಿಎಸ್‌ಕೆ ಸ್ಕೋರ್ 80 ರನ್ ದಾಟುವುದು ಕೂಡ ಕಷ್ಟವಿತ್ತು.

ರಾಜಸ್ಥಾನ ರಾಯಲ್ಸ್ ಪರ ಜೋಫ್ರಾ ಆರ್ಚರ್ ಮತ್ತು ನಾಂದ್ರೆ ಬರ್ಗರ್ ತಮ್ಮ ವೇಗದ ಮೂಲಕ ಸಿಎಸ್‌ಕೆ ಬ್ಯಾಟರ್‌ಗಳನ್ನು ಕಟ್ಟಿಹಾಕಿದರೆ, ಸ್ಪಿನ್ ವಿಭಾಗದಲ್ಲಿ ರವೀಂದ್ರ ಜಡೇಜಾ ಮಿಂಚಿದರು. ಈ ಮೂವರು ಬೌಲರ್‌ಗಳು ತಲಾ 2 ವಿಕೆಟ್ ಪಡೆಯುವ ಮೂಲಕ ಸಿಎಸ್‌ಕೆ ಬೆನ್ನೆಲುಬು ಮುರಿದರು. ಅಂತಿಮವಾಗಿ ಚೆನ್ನೈ 127 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

Exit mobile version