CSK vs MI ಹೈವೋಲ್ಟೇಜ್ ಫೈಟ್: ಪಂದ್ಯದಲ್ಲಿ ಆಡಲಿದ್ದಾರಾ ಧೋನಿ-ರೋಹಿತ್‌?

Untitled design 2026 05 02T140353.924

ಚೆನ್ನೈ, ಮೇ 2: ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ 2026ರ ಬಹುನಿರೀಕ್ಷಿತ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಸ್ಟಾರ್ ಆಟಗಾರರಾದ ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಆಡಲಿದ್ದಾರೆಯೇ ಎಂಬುದು ಎಲ್ಲರ ಗಮನ ಸೆಳೆದಿದೆ. ಇಬ್ಬರೂ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆ ಅವರ ಲಭ್ಯತೆ ಬಗ್ಗೆ ಕೋಚ್‌ಗಳು ನೀಡಿದ ಮಾಹಿತಿ ಕುತೂಹಲ ಹೆಚ್ಚಿಸಿದೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ ಈ ಸೀಸನ್‌ನಲ್ಲಿ ಗಾಯದ ಕಾರಣದಿಂದಾಗಿ ನಿರಂತರವಾಗಿ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿರುವ ರೋಹಿತ್ ಕಳೆದ ನಾಲ್ಕು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದು, ಇತ್ತೀಚೆಗೆ ಚೆನ್ನೈನಲ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಆದರೆ ಅವರು ಸಂಪೂರ್ಣ ಫಿಟ್ ಆಗಿದಾರೆಯೇ ಎಂಬುದನ್ನು ವೈದ್ಯಕೀಯ ತಂಡವೇ ನಿರ್ಧರಿಸಬೇಕಿದೆ.

ಮುಂಬೈ ತಂಡದ ಮುಖ್ಯ ಕೋಚ್ ಮಹೇಲ ಜಯವರ್ಧನೆ ಈ ಕುರಿತು ಮಾತನಾಡಿ, “ರೋಹಿತ್ ಅವರ ಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ. ಅವರು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಪಂದ್ಯಕ್ಕೆ ಅವರನ್ನು ಸೇರಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ವೈದ್ಯಕೀಯ ತಂಡದ ಸಲಹೆ ಆಧರಿಸಿ ತೆಗೆದುಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಎಂಎಸ್ ಧೋನಿ ಕೂಡ ಗಾಯದಿಂದ ಬಳಲುತ್ತಿದ್ದು, ಕಳೆದ ಕೆಲವು ವಾರಗಳಿಂದ ತಂಡದಿಂದ ದೂರವಿದ್ದಾರೆ. ಸೀಸನ್ ಆರಂಭಕ್ಕೂ ಮುನ್ನವೇ ಗಾಯಗೊಂಡಿದ್ದ ಧೋನಿ ಸುಮಾರು ಮೂರು ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.

ಚೆನ್ನೈ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಧೋನಿ ಸ್ಥಿತಿ ಬಗ್ಗೆ ಮಾತನಾಡಿ, “ಧೋನಿ ಬಹಳ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಶೀಘ್ರದಲ್ಲೇ ತಂಡಕ್ಕೆ ಮರಳುವ ವಿಶ್ವಾಸ ಇದೆ. ಪಂದ್ಯ ಆಡುತ್ತಾರಾ ಅಥವಾ ಮುಂದಿನ ಪಂದ್ಯದಲ್ಲಾ ಎಂಬುದು ಸ್ಪಷ್ಟವಿಲ್ಲ. ಆದರೆ ಅವರ ಪ್ರಗತಿ ತುಂಬಾ ಉತ್ತಮವಾಗಿದೆ” ಎಂದು ಹೇಳಿದ್ದಾರೆ. ಧೋನಿ ಯಾವಾಗ ಕಮ್‌ಬ್ಯಾಕ್ ಮಾಡುತ್ತಾರೆ ಎಂಬುದರ ಬಗ್ಗೆ ಅಂತಿಮ ನಿರ್ಧಾರ ಅವರದೇ ಆಗಿರಲಿದೆ ಎಂದು ಹಸ್ಸಿ ತಿಳಿಸಿದ್ದಾರೆ.

ಇಬ್ಬರೂ ಸ್ಟಾರ್ ಆಟಗಾರರು ಇನ್ನೂ ಸಂಪೂರ್ಣ ಫಿಟ್ ಆಗದಿರುವ ಕಾರಣ ಈ ಮಹತ್ವದ ಪಂದ್ಯದಲ್ಲಿ ಅವರು ಆಡದಿರುವ ಸಾಧ್ಯತೆಯೂ ಇದೆ. ಇದರಿಂದಾಗಿ ಅಭಿಮಾನಿಗಳಲ್ಲಿ ಸ್ವಲ್ಪ ನಿರಾಶೆ ಕಂಡುಬರುತ್ತಿದ್ದರೂ, ಯುವ ಆಟಗಾರರಿಗೆ ಅವಕಾಶ ಸಿಗುವ ನಿರೀಕ್ಷೆಯೂ ಇದೆ.

ಚೆನ್ನೈ ತಂಡವು ಈ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ತಂಡಕ್ಕೆ ಬಲ ನೀಡಲಿದ್ದಾರೆ. ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ತಂಡದ ಬಲವಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮುಖೇಶ್ ಚೌಧರಿ ಮತ್ತು ನೂರ್ ಅಹ್ಮದ್ ಪ್ರಮುಖ ಪಾತ್ರವಹಿಸಲಿದ್ದಾರೆ.

Exit mobile version