ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು..ಕಾರಣವೇನು?

Untitled design 2025 10 21t112434.150

ಪಣಜಿ: ಭಾರತದ ಫುಟ್ಬಾಲ್ ಅಭಿಮಾನಿಗಳಿಗೆ ಬಹು ನಿರೀಕ್ಷಿತ ಕ್ಷಣ ಏಕಾಏಕಿ ನಿರಾಸೆಯಾಗಿದೆ. ಏಕೆಂದರೆ ವಿಶ್ವಪ್ರಸಿದ್ಧ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಭಾರತಕ್ಕೆ ಆಗಮಿಸುವ ಯೋಜನೆ ತಾತ್ಕಾಲಿಕವಾಗಿ ರದ್ದುಪಡಿಸಿದ್ದಾರೆ. ಸೌದಿ ಅರೇಬಿಯಾದ ಅಲ್-ನಸ್ರ್ (Al Nassr) ಕ್ಲಬ್ ಪರ ಆಡುತ್ತಿರುವ ರೊನಾಲ್ಡೊ, ಮಂಗಳವಾರ ನಡೆಯಲಿರುವ ಎಎಫ್‌ಸಿ ಚಾಂಪಿಯನ್ಸ್ ಲೀಗ್ -2 (AFC Champions League-2) ಟೂರ್ನಿಯಲ್ಲಿ ಎಫ್‌ಸಿ ಗೋವಾ (FC Goa) ವಿರುದ್ಧ ಮೈದಾನಕ್ಕಿಳಿಯಬೇಕಾಗಿತ್ತು. ಆದರೆ ಭಾರತಕ್ಕೆ ಬಂದ ಅಲ್-ನಸ್ರ್ ತಂಡದ ಪಟ್ಟಿ ನೋಡಿ ಎಲ್ಲರೂ ಬೆಚ್ಚಿಬಿದ್ದರು. ಯಾಕೆಂದರೆ ರೊನಾಲ್ಡೊ ಅವರ ಹೆಸರು ಅದರಲ್ಲಿ ಇರಲಿಲ್ಲ.

ಸೋಮವಾರ ತಡರಾತ್ರಿ ಅಲ್-ನಸ್ರ್ ತಂಡ ಗೋವಾಕ್ಕೆ ಆಗಮಿಸಿತ್ತು. ರೊನಾಲ್ಡೊ ಅವರನ್ನು ಸ್ವಾಗತಿಸಲು ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಹೊರಗೆ ಸೇರಿದ್ದರು. ಆದರೆ ತಂಡದ ಬಸ್‌ನಲ್ಲಿ ಅವರು ಮಾತ್ರ ಕಾಣಿಸಲಿಲ್ಲ. “ರೊನಾಲ್ಡೊ ಭಾರತಕ್ಕೆ ಬಂದಿಲ್ಲ” ಎಂಬ ಸುದ್ದಿ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಅಭಿಮಾನಿಗಳು “ಒಮ್ಮೆ ಕಣ್ತುಂಬಿಕೊಳ್ಳಬೇಕು” ಎಂದು ಕಾಯುತ್ತಿದ್ದ ಕನಸು ಕ್ಷಣದಲ್ಲೇ ನುಚ್ಚುನೂರಾಯಿತು.

ಅಲ್-ನಸ್ರ್‌ನ ಅಧಿಕೃತ ಸ್ಪಷ್ಟನೆ

ಈ ಕುರಿತು ಅಲ್-ನಸ್ರ್ ಕ್ಲಬ್ ಸೋಮವಾರ ಅಧಿಕೃತ ಪ್ರಕಟಣೆ ನೀಡಿದೆ. ಅದರ ಪ್ರಕಾರ, 40 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ಮುಂದಿನ ವರ್ಷ ನಡೆಯಲಿರುವ ಫಿಫಾ ವಿಶ್ವಕಪ್ 2026 (FIFA World Cup 2026) ಸ್ಪರ್ಧೆ ಮೇಲೆ ಗಮನ ಕೆಂದ್ರೀಕರಿಸಿದ್ದಾರೆ. ದೀರ್ಘಾವಧಿಯ ವೃತ್ತಿಜೀವನವನ್ನು ಕಾಪಾಡಿಕೊಳ್ಳಲು ಹಾಗೂ ಶಾರೀರಿಕ ಫಿಟ್ನೆಸ್ ಕಾಪಾಡಿಕೊಳ್ಳಲು ಅವರು ಕೆಲವು ಪಂದ್ಯಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚಿನ ವಾರಗಳಲ್ಲಿ ನಿರಂತರ ಪಂದ್ಯಗಳಿಂದ ಉಂಟಾದ ಶಾರೀರಿಕ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ರೊನಾಲ್ಡೊ ತಂಡದ ಸಲಹೆಯ ಮೇರೆಗೆ ಈ ಪ್ರವಾಸದಿಂದ ದೂರ ಉಳಿದಿದ್ದಾರೆ ಎಂದು ಕ್ಲಬ್ ತಿಳಿಸಿದೆ.

ರೊನಾಲ್ಡೊ ಅವರ ಅಲ್-ನಸ್ರ್ ಒಪ್ಪಂದದಲ್ಲಿ ಒಂದು ವಿಶೇಷ ಶರತ್ತು ಇದೆ. ಅವರಿಗೆ ತಮ್ಮ ಆಟದ ವೇಳಾಪಟ್ಟಿಯನ್ನು ಆಯ್ಕೆ ಮಾಡುವ ಹಕ್ಕು ನೀಡಲಾಗಿದೆ. ಅಂದರೆ ಯಾವ ಪಂದ್ಯದಲ್ಲಿ ಆಡಬೇಕು, ಯಾವ ಪಂದ್ಯದಲ್ಲಿ ವಿಶ್ರಾಂತಿ ಬೇಕು ಎಂಬುದನ್ನು ಅವರು ನಿರ್ಧರಿಸಬಹುದು. ಈ ಹಿನ್ನೆಲೆಯಲ್ಲಿ, ಗೋವಾ ವಿರುದ್ಧದ ಪಂದ್ಯವನ್ನು ಅವರು “ಔಪಚಾರಿಕ ಪಂದ್ಯ” ಎಂದು ಪರಿಗಣಿಸಿ ಅದರಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ರೊನಾಲ್ಡೊ ಅಭಿಮಾನಿಗಳಿಗೆ ಇದು ತಾತ್ಕಾಲಿಕ ನಿರಾಸೆ ಮಾತ್ರ. ವಿಶ್ವಮಟ್ಟದ ಕ್ರೀಡಾ ಸಂಪರ್ಕ ಕಾರ್ಯಕ್ರಮಗಳ ಭಾಗವಾಗಿ ಅವರು ಮುಂದಿನ ವರ್ಷ ಭಾರತ ಪ್ರವಾಸ ಮಾಡಲು ಆಸಕ್ತಿ ತೋರಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ.

Exit mobile version