ಕೊಹ್ಲಿ-ಪಡಿಕ್ಕಲ್ ಅಬ್ಬರಕ್ಕೆ ಬೆದರಿದ ಗುಜರಾತ್: ಚಿನ್ನಸ್ವಾಮಿಯಲ್ಲಿ 50ನೇ ಗೆಲುವಿನ ಸಂಭ್ರಮ

BeFunky collage (34)

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮತ್ತೊಮ್ಮೆ ಅಬ್ಬರಿಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಆರ್‌ಸಿಬಿ ಐತಿಹಾಸಿಕ ಸಾಧನೆ ಮಾಡಿದೆ. ಇದು ಚಿನ್ನಸ್ವಾಮಿ ಮೈದಾನದಲ್ಲಿ ಬೆಂಗಳೂರು ತಂಡಕ್ಕೆ ಸಿಕ್ಕ 50ನೇ ಗೆಲುವು ಎಂಬುದು ವಿಶೇಷ. ಈ ಗೆಲುವಿನೊಂದಿಗೆ ಆರ್‌ಸಿಬಿ ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಸಾಯಿ ಸುದರ್ಶನ್ ಶತಕ ವ್ಯರ್ಥ :

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಅದ್ಭುತ ಆರಂಭ ನೀಡಿದರು. ಸುದರ್ಶನ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಈ ಜೋಡಿ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡುವ ಮೂಲಕ ಬೃಹತ್ ಮೊತ್ತದ ಮುನ್ಸೂಚನೆ ನೀಡಿತು. ಗಿಲ್ 32 ರನ್ ಗಳಿಸಿ ಔಟಾದ ನಂತರ ಬಂದ ಜೋಸ್ ಬಟ್ಲರ್ (25) ಅಲ್ಪ ಕಾಣಿಕೆ ನೀಡಿದರು. ಅಂತಿಮವಾಗಿ ಜೇಸನ್ ಹೋಲ್ಡರ್ ಅವರ ಉಪಯುಕ್ತ ರನ್‌ಗಳ ನೆರವಿನಿಂದ ಗುಜರಾತ್ 3 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿತು. ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ ಒಂದು ವಿಕೆಟ್ ಪಡೆದರು.

ಕೊಹ್ಲಿ-ಪಡಿಕ್ಕಲ್ ಬ್ಯಾಟಿಂಗ್ ಅಬ್ಬರ :

206 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಆರಂಭದಲ್ಲೇ ಜಾಕೋಬ್ ಬೆಥೆಲ್ ರೂಪದಲ್ಲಿ ಆಘಾತ ಎದುರಾಯಿತು. ಆದರೆ, ಆರಂಭದಲ್ಲೇ ಜೀವದಾನ ಪಡೆದ ವಿರಾಟ್ ಕೊಹ್ಲಿ ಅಕ್ಷರಶಃ ಗುಜರಾತ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ದೇವದತ್ ಪಡಿಕ್ಕಲ್ ಜೊತೆಗೂಡಿದ ಕೊಹ್ಲಿ ರನ್ ಮಳೆ ಹರಿಸಿದರು. ಕೇವಲ 26 ಎಸೆತಗಳಲ್ಲಿ ಈ ಜೋಡಿ ಅರ್ಧಶತಕದ ಜೊತೆಯಾಟ ಪೂರೈಸಿತು.

ಪಡಿಕ್ಕಲ್ ಕೇವಲ 20 ಎಸೆತಗಳಲ್ಲಿ 6 ಸಿಕ್ಸರ್‌ಗಳ ನೆರವಿನಿಂದ ಸಿಡಿಲಬ್ಬರದ ಅರ್ಧಶತಕ ಪೂರೈಸಿದರೆ, ಕಿಂಗ್ ಕೊಹ್ಲಿ 30 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. ಈ ಜೋಡಿಯ 47 ಎಸೆತಗಳ ಶತಕದ ಜೊತೆಯಾಟ ಪಂದ್ಯವನ್ನು ಗುಜರಾತ್ ಕೈಯಿಂದ ಕಿತ್ತುಕೊಂಡಿತು. ಕೊನೆಯಲ್ಲಿ ಕೃನಾಲ್ ಪಾಂಡ್ಯ (23) ಅಜೇಯ ಆಟವಾಡಿ 19ನೇ ಓವರ್‌ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Exit mobile version