ಬೆಂಗಳೂರು: ಆರ್‌ಸಿಬಿ (RCB) ಅಭಿಮಾನಿಗಳು ಕಾಯುತ್ತಿದ್ದ ಸಿಹಿಸುದ್ದಿ ಈಗ ಹೊರಬಿದ್ದಿದೆ. ಕಾಲ್ತುಳಿತ ದುರಂತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಹಾಕಿದ್ದ ತಾತ್ಕಾಲಿಕ ನಿರ್ಬಂಧವನ್ನು ರಾಜ್ಯ ಸರ್ಕಾರ ತೆರವುಗೊಳಿಸಿದೆ. ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಚಿನ್ನಸ್ವಾಮಿ ಮೈದಾನದಲ್ಲಿ ಮತ್ತೆ ಪಂದ್ಯಾವಳಿಗಳಿಗೆ ಅಸ್ತು ನೀಡಲಾಗಿದೆ.
ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ
ಬೆಳಗಾವಿಯ ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಾಲ್ತುಳಿತ ಘಟನೆಯ ನಂತರದ ಭದ್ರತಾ ಕ್ರಮಗಳ ವರದಿ, ಜನಸಂದಣಿ ನಿರ್ವಹಣೆ ಮತ್ತು ಮೈದಾನದಲ್ಲಿ ಪಂದ್ಯಗಳನ್ನು ಪುನರಾರಂಭಿಸಲು ಬೇಕಾದ ನಿಯಮಾವಳಿಗಳ ಕುರಿತು ವಿಶ್ಲೇಷಣೆ ನಡೆಯಿತು. ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಸಮಿತಿ ಸಲ್ಲಿಸಿದ್ದ ವರದಿಯ ಶಿಫಾರಸ್ಸುಗಳನ್ನು ಪರಿಗಣಿಸಿ, ಹಂತ ಹಂತವಾಗಿ ಶಿಫಾರಸ್ಸುಗಳನ್ನು ಜಾರಿಗೆ ತರಲು ಸಂಪುಟ ಒಪ್ಪಿಗೆ ನೀಡಿದೆ.
ಪಂದ್ಯಾವಳಿ ದಿನಗಳಲ್ಲಿ ಟ್ರಾಫಿಕ್ ನಿರ್ವಹಣೆ, ಪ್ರವೇಶ-ನಿಗಮ ಬಾಗಿಲುಗಳ ವ್ಯವಸ್ಥೆ, ಹೆಚ್ಚಿನ ಪೊಲೀಸ್ ನಿಯೋಜನೆ ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆಗೆ ಹೊಸ SOP (Standard Operating Procedure) ಜಾರಿಗೆ ಬರುತ್ತದೆ ಎಂದು ಸರ್ಕಾರ ಮೂಲಗಳು ತಿಳಿಸಿವೆ.
ಕೆಎಸ್‌ಸಿಎ–ಸರ್ಕಾರದ ಮಾತುಕತೆ
ಇಂದು ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ನಡೆದ ಮಾತುಕತೆ ನಿರ್ಣಾಯಕವಾಗಿತ್ತು. ಸಭೆ ಬಳಿಕ ಮಾತನಾಡಿದ ಡಿಕೆಶಿ ಅವರು,
“ನಮಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಿಲ್ಲಿಸುವ ಉದ್ದೇಶವೇ ಇರಲಿಲ್ಲ. ಜನಜಂಗುಳಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಕುನ್ಹಾ ಸಮಿತಿ ನೀಡಿರುವ ಸಲಹೆಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು. ಅಭಿಮಾನಿಗಳ ಭಾವನೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತೇವೆ,” ಎಂದು ಸ್ಪಷ್ಟಪಡಿಸಿದರು.
ಈ ನಿರ್ಧಾರದೊಂದಿಗೆ RCB ಸೇರಿದಂತೆ ಬೆಂಗಳೂರು ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗೆ ಸರ್ಕಾರ ಸ್ಪಂದಿಸಿದೆ.
ಐಪಿಎಲ್ 2025 ಮಿನಿ ಹರಾಜಿಗೂ ಕೌಂಟ್ಡೌನ್ ಆರಂಭ
ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿರುವ ಐಪಿಎಲ್ ಸೀಸನ್-19ರ ಮಿನಿ ಹರಾಜು ಸಿದ್ಧತೆ ಜೋರಾಗಿದೆ. ಹರಾಜನ್ನು ಒಂದು ದಿನದಲ್ಲೇ ಮುಗಿಸಲು BCCI ಯೋಜನೆ ರೂಪಿಸಿದೆ. ಕಳೆದ ವರ್ಷ ನಡೆದ ಮೆಗಾ ಹರಾಜು ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿ 2 ದಿನಗಳ ಕಾಲ ಜರುಗಿತ್ತು.
ಈ ಬಾರಿ 10 ಫ್ರಾಂಚೈಸಿಗಳು ಒಟ್ಟು 173 ಆಟಗಾರರನ್ನು ಉಳಿಸಿಕೊಂಡಿದ್ದು, ಉಳಿದ 77 ಸ್ಥಾನಗಳಿಗೆ ಮಾತ್ರ ಹರಾಜು ನಡೆಯಲಿದೆ. ಆಟಗಾರರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಶಾರ್ಟ್ ಲಿಸ್ಟ್ ಪ್ರಕಟವಾಗಲಿದೆ. ಈ ಪಟ್ಟಿಯಲ್ಲಿ ಇರುವ ಆಟಗಾರರೇ ಹರಾಜಿನ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
RCB, CSK, MI ಸೇರಿದಂತೆ ಎಲ್ಲಾ ತಂಡಗಳು ಹೊಸ ಸೀಸನ್‌ಗಾಗಿ ತಮ್ಮ ತಂಡ ರಚನೆ ಬಲಪಡಿಸಲು ತಯಾರಿ ನಡೆಸುತ್ತಿವೆ. ಕಳೆದ ಬಾರಿ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟವಾದ ಆಟಗಾರರ ವರ್ತಮಾನ ಮೌಲ್ಯ ಮತ್ತು ಈ ಬಾರಿ ಯಾವ ಫ್ರಾಂಚೈಸಿ ಯಾವ ಆಟಗಾರಿಗೆ ಪೈಪೋಟಿ ನಡೆಸಲಿದೆ ಎಂಬ ಕುತೂಹಲ ಈಗಾಗಲೇ ಕ್ರಿಕೆಟ್ ವಲಯದಲ್ಲಿ ಜೋರಾಗಿದೆ.
