CCL 2026: ಪಂಜಾಬ್ ವಿರುದ್ಧ ಕಿಚ್ಚನ‌ ಪಡೆಗೆ ಭರ್ಜರಿ ಜಯ

Untitled design 2026 01 16T210251.670

ವಿಶಾಖಪಟ್ಟಣ:  ಚಂದನವನದ ತಾರೆಯರ ತಂಡ ಕರ್ನಾಟಕ ಬುಲ್ಡೋಜರ್ಸ್, ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ (CCL) 12ನೇ ಆವೃತ್ತಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಇಂದು (ಜ.16) ನಡೆದ ವಿಶಾಖಪಟ್ಟಣದಲ್ಲಿ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಪಂಜಾಬ್ ದೆ ಶೇರ್ ವಿರುದ್ಧ 31 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಕಿಚ್ಚ ಸುದೀಪ್ ಸಾರಥ್ಯದ ತಂಡ ಶುಭಾರಂಭ ಮಾಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ದೆ ಶೇರ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡು, ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆರಂಭದಲ್ಲಿ ಸಾಧಾರಣ ಪ್ರದರ್ಶನ ತೋರಿದ ಬುಲ್ಡೋಜರ್ಸ್ ಪಡೆಗೆ ಕರಣ್ ಆರ್ಯನ್ ನೆರವಾದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಕರಣ್ ಆರ್ಯನ್ ಕೇವಲ 33 ಎಸೆತಗಳಲ್ಲಿ 83 ರನ್ ಬಾರಿಸಿದರು. ಇದರಿಂದ ಕರ್ನಾಟಕ ತಂಡವು 19.2 ಓವರ್‌ಗಳಲ್ಲಿ 170 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಪ್ರತಾಪ್ (18), ಪ್ರದೀಪ್ (17) ಮತ್ತು ಡಾರ್ಲಿಂಗ್ ಕೃಷ್ಣ (14) ರನ್ ಗಳಿಸಿದರು.

ಪಂಜಾಬ್ ಪರ ಬೌಲಿಂಗ್ ಮಾಡಿದ ದಕ್ಷ್‌ ಒಟ್ಟು ಐದು ವಿಕೆಟ್ ಕಿತ್ತು ಗಮನ ಸೆಳೆದರೆ, ನಿಂಜಾ ಮತ್ತು ಹಾರ್ಡಿ ತಲಾ ಒಂದು ವಿಕೆಟ್ ಪಡೆದರು. 171 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ದೆ ಶೇರ್ ತಂಡಕ್ಕೆ ಕರ್ನಾಟಕದ ಬೌಲರ್‌ಗಳು ಆರಂಭದಲ್ಲೇ ಕಡಿವಾಣ ಹಾಕಿದ್ರು. ಪಂಜಾಬ್ ಪರ ರಾಹುಲ್ ಜೇಟ್ಲಿ 44 ಎಸೆತಗಳಲ್ಲಿ 68 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರೂ, ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಸಾಥ್ ಸಿಗಲಿಲ್ಲ. ಸಾವಂತ್ (28) ಮತ್ತು ಅನುಜ್ (11) ಹೊರತುಪಡಿಸಿ ಇತರರು ರನ್ ಗಳಿಸಲು ಪರದಾಡಿದರು. ಅಂತಿಮವಾಗಿ ಪಂಜಾಬ್ ತಂಡವು 18.3 ಓವರ್‌ಗಳಲ್ಲಿ 139 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಕರ್ನಾಟಕ ಬುಲ್ಡೋಜರ್ಸ್ ಬೌಲಿಂಗ್‌ನಲ್ಲೂ ಶಿಸ್ತುಬದ್ಧ ಪ್ರದರ್ಶನ ನೀಡಿತು. ಪ್ರದೀಪ್ 3 ವಿಕೆಟ್ ಪಡೆದು ಪಂಜಾಬ್ ತಂಡದ ಬೆನ್ನೆಲುಬು ಮುರಿದರು. ಕರಣ್ ಆರ್ಯನ್ ಮತ್ತು ಕಾರ್ತಿಕ್ ತಲಾ 2 ವಿಕೆಟ್ ಪಡೆದರೆ, ಚಂದನ್ 1 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕರಣ್ ಆರ್ಯನ್ ಅವರ ಆಲ್ ರೌಂಡರ್ ಪ್ರದರ್ಶನ ಪಂದ್ಯದ ಹೈಲೈಟ್ ಆಗಿತ್ತು.

ಈ ಗೆಲುವಿನೊಂದಿಗೆ ಕರ್ನಾಟಕ ಬುಲ್ಡೋಜರ್ಸ್ ಟೂರ್ನಿಯಲ್ಲಿ ವಿಶ್ವಾಸಾರ್ಹ ಮುನ್ನಡೆ ಸಾಧಿಸಿದ್ದು, ಮುಂದಿನ ಪಂದ್ಯಗಳ ಮೇಲೆ ಗಮನ ಹರಿಸಿವೆ.

Exit mobile version