ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ವೇಳೆ ಸಂಭವಿಸಿದ ದುರಂತ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ಆರ್‌ಸಿಬಿ ಮತ್ತು ಡಿಎನ್‌ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್‌ನ ಪದಾಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ.
ಈ ಪ್ರಕರಣದಲ್ಲಿ ದಾಖಲಾಗಿರುವ ಕ್ರಿಮಿನಲ್ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯಲ್ಲಿ, ಹೈಕೋರ್ಟ್ ಆಗಸ್ಟ್ 5ರವರೆಗೆ ಆರೋಪಪಟ್ಟಿ ಸಲ್ಲಿಸದಂತೆ ಮತ್ತು ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿದೆ.
18 ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಆರ್‌ಸಿಬಿ ಕಪ್ ಗೆದ್ದ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಣೆಗೆ ಫ್ರಾಂಚೈಸಿ ತೀರ್ಮಾನಿಸಿತ್ತು. ವಿಧಾನಸೌಧದ ಮುಂಭಾಗದಲ್ಲಿ ಸರ್ಕಾರವೂ ಆರ್‌ಸಿಬಿ ಆಟಗಾರರನ್ನು ಅಭಿನಂದಿಸಿತ್ತು. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸೇರಿದ್ದರಿಂದ ಗೇಟ್ ಸಂಖ್ಯೆ 6 ಮತ್ತು 7ರ ಬಳಿ ತಳ್ಳಾಟ ಉಂಟಾಗಿ ಕಾಲ್ತುಳಿತ ಸಂಭವಿಸಿತು. ಈ ದುರಂತದಲ್ಲಿ 11 ಜನ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಈ ಘಟನೆಯ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೆಎಸ್‌ಸಿಎ, ಆರ್‌ಸಿಬಿ, ಮತ್ತು ಡಿಎನ್‌ಎ ಎಂಟರ್ಟೈನ್ಮೆಂಟ್ ಪದಾಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಕೆಲವರನ್ನು ಬಂಧಿಸಲಾಗಿತ್ತು. ಆದರೆ, ಈ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ಕೋರಿ ಪದಾಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಈಗ ಆಗಸ್ಟ್ 5ರವರೆಗೆ ಚಾರ್ಜ್‌ಶೀಟ್ ಸಲ್ಲಿಸದಂತೆ ಸೂಚಿಸಿದ್ದು, ಬಲವಂತದ ಕ್ರಮಗಳಿಂದ ರಕ್ಷಣೆ ನೀಡಿದೆ.
ಕೆಎಸ್‌ಸಿಎ, ಆರ್‌ಸಿಬಿ ಮತ್ತು ಡಿಎನ್‌ಎ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿದ ಹೈಕೋರ್ಟ್, ಈ ಸಂಸ್ಥೆಗಳ ಪದಾಧಿಕಾರಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಈಗಾಗಲೇ ಆದೇಶಿಸಿತ್ತು. ಈ ಆದೇಶವನ್ನು ಇದೀಗ ಆಗಸ್ಟ್ 5ರವರೆಗೆ ವಿಸ್ತರಿಸಲಾಗಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 5ಕ್ಕೆ ಮುಂದೂಡಲಾಗಿದ್ದು, ಈ ಅವಧಿಯಲ್ಲಿ ಪದಾಧಿಕಾರಿಗಳಿಗೆ ಮಧ್ಯಂತರ ರಕ್ಷಣೆ ದೊರೆತಿದೆ.