ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಟಿಕೆಟ್ ಬ್ಲಾಕ್ ದಂಧೆ ಅಬ್ಬರ: ಕ್ಯಾಂಟೀನ್ ನೌಕರನ ಬಳಿ 100ಕ್ಕೂ ಹೆಚ್ಚು ಟಿಕೆಟ್..!

123

ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಟಿಕೆಟ್‌ಗಳ ಕಾಳಸಂತೆ ದಂಧೆ ಅಬ್ಬರ ಜೋರಾಗಿದೆ . ಈ ಬ್ಲಾಕ್‌ ದಂಧೆಯ ಆಳಕ್ಕಿಳಿದು  ಬೆಂಗಳೂರು ಪೊಲೀಸ್ ಕೇಂದ್ರೀಯ ಅಪರಾಧ ವಿಭಾಗ (CCB) ತನಿಖೆ ನಡೆಸಿದಾಗ ಸ್ಟೇಡಿಯಂ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಎಂಬಾತನ ಬಳಿ 100ಕ್ಕೂ ಹೆಚ್ಚು ಐಪಿಎಲ್‌ ಟಿಕೆಟ್‌ಗಳು ಪತ್ತೆಯಾಗಿವೆ.

ಪೊಲೀಸ್ ಮಾಹಿತಿಯ ಪ್ರಕಾರ, ಆರೋಪಿ ಟಿಕೆಟ್‌ಜೀನಿ (Ticketgenie) ಮೂಲಕ ಟಿಕೆಟ್‌ಗಳನ್ನು ಖರೀದಿಸಿ, ಬ್ಲಾಕ್ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾನೆ. ಈ ತಿಂಗಳಲ್ಲಿ ಒಟ್ಟು 181 ಟಿಕೆಟ್‌ಗಳನ್ನು ಸುಮಾರು 17.5 ಲಕ್ಷ ರೂಪಾಯಿ ಖರ್ಚು ಮಾಡಿ ಖರೀದಿಸಿ, ಅವುಗಳನ್ನು ಹಲವಾರು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸ್ಟೇಡಿಯಂನ ಇನ್ನೊಬ್ಬ ಸಿಬ್ಬಂದಿಯೂ ಈ ದಂಧೆಯಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

ಐಪಿಎಲ್ ಪಂದ್ಯಗಳ ಸಮಯದಲ್ಲಿ ಟಿಕೆಟ್‌ಗಳು ತ್ವರಿತವಾಗಿ ಮುಗಿದುಹೋಗುವುದರಿಂದ ಅಭಿಮಾನಿಗಳು ಹತಾಶರಾಗುತ್ತಾರೆ. ಹಾಗಾಗಿ ಇದನ್ನು ದುರುಪಯೋಗಪಡಿಸಿಕೊಂಡು ಕೆಲವರು ಬ್ಲಾಕ್ ಮಾರುಕಟ್ಟೆಯಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ . ಅಂದರೆ 5000 ರೂಪಾಯಿ ಟಿಕೆಟ್‌ಗಳನ್ನು ಸುಮಾರು 20,000ದಿಂದ 50,000ಸಾವಿರ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ನಿಜವಾದ ಅಭಿಮಾನಿಗಳು ಟಿಕೆಟ್ ಪಡೆಯಲು ಕಷ್ಟವಾಗುತ್ತಿದೆ.

ಹಿಂದಿನ ದಿನಗಳಲ್ಲಿ RCB vs CSK ಪಂದ್ಯದ ವೇಳೆಯೂ 11 ಮಂದಿಯನ್ನು ಬಂಧಿಸಿ 28 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈಗ ಮತ್ತೆ ಕ್ಯಾಂಟೀನ್ ನೌಕರನ ಬಂಧನದೊಂದಿಗೆ ದಂಧೆಯಲ್ಲಿ ಆಂತರಿಕ ಸಹಕಾರವಿದೆ ಎಂಬ ಆರೋಪಗಳು ಕೇಳಿಬಂದಿವೆ.

ಬೆಂಗಳೂರು ಪೊಲೀಸ್ ಕಮಿಷನರ್ ಅವರು ಬ್ಲಾಕ್ ಟಿಕೆಟ್ ದಂಧೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಆದರೂ ಈ ದಂಧೆ ಮತ್ತೆ ಮತ್ತೆ ಬೆಳಕಿಗೆ ಬರುತ್ತಿರುವುದು  ಟಿಕೆಟ್ ಮಾರಾಟ ವ್ಯವಸ್ಥೆಯಲ್ಲಿ ದೊಡ್ಡ ಲೋಪಗಳಿವೆ ಎಂದು ಸೂಚಿಸುತ್ತಿದೆ. m-ಟಿಕೆಟಿಂಗ್ ವ್ಯವಸ್ಥೆ ಜಾರಿಗೆ ಬಂದರೂ ಕೂಡ ಬ್ಲಾಕ್ ಮಾರುಕಟ್ಟೆ ತಡೆಯಲು ಸಾಧ್ಯವಾಗುತ್ತಿಲ್ಲ.

ಅಭಿಮಾನಿಗಳು ಟಿಕೆಟ್‌ಗಳನ್ನು ಕಾನೂನುಬದ್ಧ ವೇದಿಕೆಗಳಿಂದ ಮಾತ್ರ ಖರೀದಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಈ ಘಟನೆಯಿಂದ ಐಪಿಎಲ್ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಇದೇ ರೀತಿಯಾಗಿ ಬ್ಲಾಕ್‌ ದಂಧೆಯ ಅಬ್ಬರ ಮುಂದುವರೆದರೆ ಮುಂದೆ ನಡೆಯುವ ಮ್ಯಾಚ್‌ಗಳಲ್ಲಿ ಅಭಿಮಾನಿಗಳು ಆಸಕ್ತಿ ಕಳೆದುಕೊಳ್ಳುವ ಪ್ರಮಾಣ ಹೆಚ್ಚಿದೆ. ಹಾಗೂ ಈ ಟಿಕೆಟ್‌ ಕಾಳಸಂತೆ ಅಬ್ಬರವನ್ನು ಪೊಲೀಸರು ಆದಷ್ಟು ಬೇಗ ನಿಯಂತ್ರಣಕ್ಕೆ ತರುವಂತೆ ಅಭಿಮಾನಿಗಳು ಕೇಳಿಕೊಂಡಿದ್ದಾರೆ.

Exit mobile version