ಭಾರತಕ್ಕೆ ಟಿ-20 ವಿಶ್ವಕಪ್ ಆಡಲು ಬರಲ್ಲ: ಬಾಂಗ್ಲಾ ಕಿರಿಕ್

BeFunky collage (93)

ಭಾರತ-ಬಾಂಗ್ಲಾದೇಶ ಕ್ರಿಕೆಟ್ ಸಂಬಂಧಗಳು ಮತ್ತೊಮ್ಮೆ ಉದ್ವಿಗ್ನಗೊಂಡಿವೆ. ಮುಂಬರುವ ಫೆಬ್ರವರಿ-ಮಾರ್ಚ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ಸಂಯುಕ್ತವಾಗಿ ಆತಿಥೇಯ ವಹಿಸಲಿರುವ ICC T20 ವಿಶ್ವಕಪ್ 2026ಗೆ ಬಾಂಗ್ಲಾದೇಶ ತಂಡವನ್ನು ಭಾರತಕ್ಕೆ ಕಳುಹಿಸದಿರಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ನಿರ್ಧರಿಸಿದೆ. ಸುರಕ್ಷತೆ ಮತ್ತು ಭದ್ರತೆಯ ಕಳವಳಗಳನ್ನು ಉಲ್ಲೇಖಿಸಿ, ತಮ್ಮ ಎಲ್ಲ ಪಂದ್ಯಗಳನ್ನು ಭಾರತದಿಂದ ಹೊರಗೆ (ಶ್ರೀಲಂಕಾಕ್ಕೆ) ಸ್ಥಳಾಂತರಿಸುವಂತೆ BCB ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC)ಗೆ ಮನವಿ ಸಲ್ಲಿಸಿದೆ.

ಈ ನಿರ್ಧಾರಕ್ಕೆ ಮುಖ್ಯ ಕಾರಣ ಮುಸ್ತಾಫಿಜುರ್ ರಹಮಾನ್ ಅವರನ್ನು IPL 2026ರಿಂದ ಹೊರಹಾಕಿದ್ದು. ಕೊಲ್ಕತಾ ನೈಟ್ ರೈಡರ್ಸ್ (KKR) ತಂಡದಲ್ಲಿ ₹9.20 ಕೋಟಿಗೆ ಖರೀದಿಸಲಾಗಿದ್ದ ಮುಸ್ತಾಫಿಜುರ್ ಅವರನ್ನು BCCI ಸೂಚನೆ ಮೇರೆಗೆ ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಉದ್ಭವಿಸಿದ ರಾಜಕೀಯ-ಕ್ರೀಡಾ ಉದ್ವಿಗ್ನತೆಯೇ ಈ ನಿರ್ಧಾರಕ್ಕೆ ಕಾರಣ ಎಂದು BCB ಹೇಳಿದೆ.

BCB ಅಧಿಕೃತ ಹೇಳಿಕೆ ಏನು ಹೇಳುತ್ತದೆ?

BCB ತುರ್ತು ಸಭೆಯ ನಂತರ ಹೊರಡಿಸಿದ ಪ್ರಕಟಣೆಯಲ್ಲಿ “ಪ್ರಸ್ತುತ ಪರಿಸ್ಥಿತಿ, ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಸಂಪೂರ್ಣ ಮೌಲ್ಯಮಾಪನದ ನಂತರ ಹಾಗೂ ಬಾಂಗ್ಲಾದೇಶ ಸರ್ಕಾರದ ಸಲಹೆಯ ಬಳಿಕ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸದೆ ಇರಲು ನಿರ್ಧರಿಸಿದ್ದೇವೆ. ನಮ್ಮ ತೀರ್ಮಾನವನ್ನು ICCಗೆ ತಿಳಿಸಿ, ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸಲು ಕೋರಲಾಗಿದೆ.”

ಬಾಂಗ್ಲಾದೇಶ ಕ್ರೀಡಾ ಸಲಹೆಗಾರ ಅಶ್ರಫ್ ನಜ್ರುಲ್ ಅವರು “ಭಾರತದಲ್ಲಿ ನಮಗೆ ಸುರಕ್ಷತೆ ಇಲ್ಲ. ಒಬ್ಬ ಆಟಗಾರನಿಗೆ IPL ಆಡಲು ಸುರಕ್ಷತೆ ನೀಡದಿದ್ದರೆ, ಇಡೀ ತಂಡಕ್ಕೆ ಹೇಗೆ? ಗುಲಾಮಗಿರಿಯ ದಿನಗಳು ಮುಗಿದಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಲ್ಲದೇ, ಬಾಂಗ್ಲಾದೇಶದಲ್ಲಿ IPL ಪಂದ್ಯಗಳ ಪ್ರಸಾರ ನಿಷೇಧಿಸುವಂತೆ ಕರೆ ನೀಡಿದ್ದಾರೆ.

ಮುಸ್ತಾಫಿಜುರ್ IPL ವಿವಾದ

ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಪಂದ್ಯಗಳು

ಬಾಂಗ್ಲಾದೇಶದ ಗ್ರೂಪ್ ಹಂತದ ಎಲ್ಲ ಪಂದ್ಯಗಳು ಭಾರತದಲ್ಲಿ (ಕೋಲ್ಕತಾ ಮತ್ತು ಮುಂಬೈ) ನಿಗದಿಯಾಗಿದ್ದವು. ICC ಒಪ್ಪಿದರೆ ಶ್ರೀಲಂಕಾಕ್ಕೆ ಸ್ಥಳಾಂತರವಾಗಬಹುದು. ಆದರೆ ಟೂರ್ನಿಯ ಆರಂಭಕ್ಕೆ ಕೇವಲ ಕೆಲವು ವಾರಗಳು ಬಾಕಿ ಇರುವುದರಿಂದ ಲಾಜಿಸ್ಟಿಕ್ ಸಮಸ್ಯೆಗಳು ಉಂಟಾಗಬಹುದು.

ICC ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಈ ವಿವಾದ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

Exit mobile version