ಆರ್‌ಸಿಬಿಯಲ್ಲಿ ಅನುಷ್ಕಾ ಶರ್ಮಾ 400 ಕೋಟಿ ಹೂಡಿಕೆ ?-16,000 ಕೋಟಿ ದಾಟಿದ RCB ಮೌಲ್ಯ..!

Untitled design 2026 01 23T124102.699

ಐಪಿಎಲ್‌ನಲ್ಲಿ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇದೀಗ ಕೇವಲ ಮೈದಾನದ ಆಟದಿಂದ ಮಾತ್ರವಲ್ಲದೆ, ಮಾಲೀಕತ್ವದ ವಿಷಯದಲ್ಲೂ ಭಾರಿ ಸುದ್ದಿಯಲ್ಲಿದೆ. 2024ರಲ್ಲಿ ಮಹಿಳಾ ತಂಡ (WPL) ಮತ್ತು 2025ರಲ್ಲಿ ಪುರುಷರ ತಂಡ (IPL) ಚಾಂಪಿಯನ್ ಪಟ್ಟಕ್ಕೇರಿದ ನಂತರ ಆರ್‌ಸಿಬಿಯ ಬ್ರಾಂಡ್ ಮೌಲ್ಯ ಗಗನಕ್ಕೇರಿದ್ದು, ಇದೀಗ ಹೊಸ ಹೂಡಿಕೆದಾರರ ಕಣ್ಣು ಈ ಫ್ರಾಂಚೈಸಿ ಮೇಲೆ ಬಿದ್ದಿದೆ.

ಅನುಷ್ಕಾ ಶರ್ಮಾ ಹೂಡಿಕೆ 

ಆರ್‌ಸಿಬಿ ಐಕಾನ್ ವಿರಾಟ್ ಕೊಹ್ಲಿ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆರ್‌ಸಿಬಿಯಲ್ಲಿ ಸುಮಾರು 400 ಕೋಟಿ ರೂಪಾಯಿ ಮೌಲ್ಯದ 3% ಪಾಲನ್ನು ಖರೀದಿಸಲು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿರಾಟ್ ಮತ್ತು ಅನುಷ್ಕಾ ಜೋಡಿಯು ಭಾರತದ ಅತ್ಯಂತ ಪ್ರಸಿದ್ದ ಸೆಲೆಬ್ರಿಟಿಗಳಾಗಿದ್ದು, ಇವರ ಈ ನಡೆ ತಂಡದ ಬ್ರಾಂಡ್ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ. ಆದರೆ, ಈ ಬಗ್ಗೆ ಅನುಷ್ಕಾ ಶರ್ಮಾ ಕಡೆಯಿಂದಾಗಲಿ ಅಥವಾ ಆರ್‌ಸಿಬಿ ಆಡಳಿತ ಮಂಡಳಿಯಿಂದಾಗಲಿ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಆರ್‌ಸಿಬಿ ತಂಡವನ್ನೇ ಖರೀದಿಸಲು ಅಧರ್ ಪೂನಾವಾಲಾ ಆಸಕ್ತಿ

ಆರ್‌ಸಿಬಿ ಖರೀದಿಯ ರೇಸ್‌ನಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನಾವಾಲಾ ಇದ್ದಾರೆ ಎಂಬುದು ಸಂಚಲನ ಮೂಡಿಸಿದೆ. ಅವರು ಇತ್ತೀಚೆಗೆ ತಮ್ಮ X ನಲ್ಲಿ ಈ ಬಗ್ಗೆ ಪೋಸ್ಟ್ ಮಾಡುವ ಮೂಲಕ ಆರ್‌ಸಿಬಿ ಖರೀದಿಸಲು ತಾವು ಸಿದ್ಧರಿರುವುದಾಗಿ ಘೋಷಿಸಿದ್ದಾರೆ.  ಮುಂಬರುವ ತಿಂಗಳುಗಳಲ್ಲಿ ಬಲವಾದ ಆಫರ್ ಅನ್ನು ಸಲ್ಲಿಸಲು ಯೋಜಿಸುತ್ತಿರುವುದಾಗಿ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು.ಆರ್‌ಸಿಬಿ ಐಪಿಎಲ್‌ನ ಪ್ರಮುಖ ಫ್ರಾಂಚೈಸಿಗಳಲ್ಲಿ ಒಂದು ಎಂದು ಹೇಳಿದ್ದಾರೆ.

ಪ್ರಸ್ತುತ ಆರ್‌ಸಿಬಿಯ ಮಾಲೀಕತ್ವ ಹೊಂದಿರುವ ಬ್ರಿಟಿಷ್ ಮದ್ಯದ ಕಂಪನಿ ಡಿಯಾಜಿಯೊ (Diageo), ತನ್ನ ಹೂಡಿಕೆಯ ಬಗ್ಗೆ ಯೋಚಿಸುತ್ತಿದೆ. ಮಾರ್ಚ್ 2026ರ ವೇಳೆಗೆ ಈ ಬಗ್ಗೆ ಅಂತಿಮ ನಿರ್ಧಾರ ಹೊರಬರುವ ಸಾಧ್ಯತೆಯಿದೆ. 2008ರಲ್ಲಿ ಕೇವಲ 111.6 ಮಿಲಿಯನ್ ಡಾಲರ್‌ಗೆ ಖರೀದಿಸಲ್ಪಟ್ಟಿದ್ದ ಈ ತಂಡದ ಮೌಲ್ಯ ಇಂದು ಶತಕೋಟಿ ಡಾಲರ್‌ಗಳನ್ನು ದಾಟಿದೆ.

2025ರಲ್ಲಿ ರಾಜತ್ ಪಾಟಿದಾರ್ ನಾಯಕತ್ವದಲ್ಲಿ ತಂಡ ಚಾಂಪಿಯನ್ ಆದ ನಂತರ, ಆರ್‌ಸಿಬಿಯ ಮೌಲ್ಯ ಬರೋಬ್ಬರಿ 2 ಬಿಲಿಯನ್ ಡಾಲರ್ (ಸುಮಾರು 16,000 ಕೋಟಿ ರೂ.) ದಾಟಬಹುದು ಎಂದು ಅಂದಾಜಿಸಲಾಗಿದೆ. ಅನೇಕ ದೊಡ್ಡ ಸಂಸ್ಥೆಗಳು ಆರ್‌ಸಿಬಿ ಮಾಲೀಕತ್ಚದ ಮೇಲೆ ಕಣ್ಣಿಟ್ಟಿವೆ ಎಂಬ ಮಾಹಿತಿ ಇದೆ.

Exit mobile version