ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕಳೆದ ಕೆಲ ತಿಂಗಳುಗಳಿಂದಲೇ ಇವರಿಬ್ಬರ ಸ್ನೇಹ ಮತ್ತು ಡೇಟಿಂಗ್ ಕುರಿತ ಗುಸುಗುಸು ಕೇಳಿಬರುತ್ತಿದ್ದರೂ, ಇದೀಗ ಮದುವೆ ಸುದ್ದಿಯೇ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸದ್ಯ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಅನಿರುದ್ಧ್ ಕೂಡ ಒಬ್ಬರು. ಅನೇಕ ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿರುವ ಅವರು, ತಮ್ಮ ವಿಭಿನ್ನ ಶೈಲಿಯಿಂದ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಒಂದು ಸಿನಿಮಾಗೆ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುತ್ತಿರುವ ಅನಿರುದ್ಧ್ ಇದೀಗ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ.
ಇನ್ನೊಂದೆಡೆ, ಐಪಿಎಲ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಆಗಿರುವ ಕಾವ್ಯಾ ಮಾರನ್ ಕೂಡ ಯುವ ಉದ್ಯಮಿಯಾಗಿಯೇ ಸಾಕಷ್ಟು ಜನಪ್ರಿಯರಾಗಿದ್ದಾರೆ. ಪಂದ್ಯಗಳ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುವ ಅವರ ಎಕ್ಸ್‌ಪ್ರೆಶನ್‌ಗಳು ಮತ್ತು ಅವರ ಹಾಜರಾತಿಯಿಂದಲೇ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಫಾಲೋವರ್ಸ್ ಗಳಿಸಿಕೊಂಡಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಅನಿರುದ್ಧ್ ಮತ್ತು ಕಾವ್ಯಾ ಕಳೆದ ಕೆಲವು ದಿನಗಳಿಂದ ಪರಸ್ಪರ ಆತ್ಮೀಯವಾಗಿದ್ದು, ಈ ವರ್ಷದ ಆಗಸ್ಟ್ ನಂತರ ಮದುವೆಯಾಗುವ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಆದರೆ, ಈ ಕುರಿತಾಗಿ ಎರಡೂ ಕುಟುಂಬಗಳು ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಹೀಗಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಮದುವೆ ಸುದ್ದಿ ಭಾರೀ ಮಟ್ಟದಲ್ಲಿ ಹರಿದಾಡುತ್ತಿದೆ.
ಈ ವದಂತಿಗಳಿಗೆ ಮೂಲ ಕಾರಣ ಕಳೆದ ವರ್ಷದ ಕೆಲವು ವೈರಲ್ ಫೋಟೋಗಳು. ಲಾಸ್ ವೇಗಾಸ್‌ನಲ್ಲಿ ಅನಿರುದ್ಧ್ ಮತ್ತು ಕಾವ್ಯಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂಬ ಹೇಳಿಕೆಗಳೊಂದಿಗೆ ಹಲವು ಚಿತ್ರಗಳು ಮತ್ತು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಡಿನ್ನರ್ ಡೇಟ್‌ಗಳಿಂದ ಹಿಡಿದು ವಿದೇಶ ಪ್ರವಾಸದವರೆಗೂ ಹಲವು ಕಥೆಗಳು ಆನ್‌ಲೈನ್‌ನಲ್ಲಿ ಸದ್ದು ಮಾಡಿದ್ದವು. ಆದರೆ, ಈ ವಿಚಾರಗಳ ಬಗ್ಗೆ ಇಬ್ಬರೂ ಸಾರ್ವಜನಿಕವಾಗಿ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ.
ಇದಕ್ಕೆ ಮತ್ತಷ್ಟು ಬಲ ನೀಡಿದ್ದು, ಕಾವ್ಯಾ ಮಾರನ್ ಅವರ ತಂದೆ ಕಲಾನಿಧಿ ಮಾರನ್ ಅವರ ಒಡೆತನದ ‘ಸನ್ ಪಿಕ್ಚರ್ಸ್’ ಬ್ಯಾನರ್‌ನ ಸಾಲು ಸಾಲು ದೊಡ್ಡ ಸಿನಿಮಾಗಳಿಗೆ ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ ಎಂಬುದು.. ಈ ಕಾರಣದಿಂದಲೇ ಎರಡು ಕುಟುಂಬಗಳ ನಡುವೆ ಉತ್ತಮ ಬಾಂಧವ್ಯ ಇದೆ ಎಂಬ ಚರ್ಚೆ ಹೆಚ್ಚಾಗಿದೆ.
ಇದಲ್ಲದೆ, ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ಈ ಸಂಬಂಧದ ಬಗ್ಗೆ ಆಸಕ್ತಿ ತೋರಿದ್ದಾರೆ ಎಂಬ ವದಂತಿಯೂ ಕೇಳಿಬರುತ್ತಿದೆ. ಅನಿರುದ್ಧ್ ಅವರಿಗೆ ಸಂಬಂಧಿಕರಾಗುವ ಹಿನ್ನೆಲೆ, ಎರಡು ಕುಟುಂಬಗಳನ್ನು ಹತ್ತಿರ ತರಲು ರಜನಿಕಾಂತ್ ಪ್ರಯತ್ನಿಸಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ಕುರಿತಾದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಈ ನಡುವೆ, ಅನಿರುದ್ಧ್ ಅವರಿಂದಲೇ ಕೆಲವು ತಿಂಗಳ ಹಿಂದೆ ಬಂದ ಪ್ರತಿಕ್ರಿಯೆಯೂ ಮತ್ತೆ ವೈರಲ್ ಆಗುತ್ತಿದೆ. ಮದುವೆ ಕುರಿತು ಪ್ರಶ್ನೆ ಕೇಳಿದಾಗ ಅವರು ನಗುತ್ತಾ “ಇದು ಬೇರೆ…” ಎಂದು ಹೇಳಿ ಮಾತು ತಪ್ಪಿಸಿದ್ದರು. ಮತ್ತೊಂದೆಡೆ, ಟ್ವೀಟ್ ಮೂಲಕ “ಮದುವೆನಾ..? ಸ್ವಲ್ಪ ವದಂತಿಗಳನ್ನು ಹರಡುವುದನ್ನೂ ನಿಲ್ಲಿಸಿ ಬಾಸ್” ಎಂದು ಬರೆದುಕೊಂಡಿದ್ದರು. ಆದರೂ, ಅಭಿಮಾನಿಗಳಲ್ಲಿ ಈ ಜೋಡಿಯ ಕುರಿತ ಕುತೂಹಲ ಹೆಚ್ಚಿಸಿದೆ.
