‘ಈ ಸಲ ಕಪ್ ನಮ್ದು’ ಎಂದ ಆರ್‌ಸಿಬಿ ಹೊಸ ‘ಗ್ಲಾಮರ್’ ಐಕಾನ್ ಅನನ್ಯಾ ಬಿರ್ಲಾ

Untitled design 2026 03 28T194505.324

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಒಡೆತನ ಬದಲಾವಣೆಯಾಗಿ ಕೆಲವೇ ದಿನಗಳಾಗಿವೆ. ಆದಿತ್ಯ ಬಿರ್ಲಾ ಒಕ್ಕೂಟವು 16,706 ಕೋಟಿ ರೂಪಾಯಿಗೆ ತಂಡವನ್ನು ಖರೀದಿಸಿದ ಬೆನ್ನಲ್ಲೇ, ಉದ್ಯಮಿ ಕುಮಾರಮಂಗಲಂ ಬಿರ್ಲಾ ಅವರ ಪುತ್ರಿ ಅನನ್ಯಾ ಬಿರ್ಲಾ ಕ್ರೀಡಾ ವಲಯದಲ್ಲಿ ಹೊಸ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾರೆ.

ತಂಡದ ಮಾಲೀಕತ್ವ ಬದಲಾದ ತಕ್ಷಣವೇ ಅನನ್ಯಾ ಅವರ ಜನಪ್ರಿಯತೆ ಗಗನಕ್ಕೇರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಫಾಲೋವರ್ಸ್ ಸಂಖ್ಯೆ ಕೇವಲ 4 ಲಕ್ಷದಿಂದ ಈಗ 22 ಲಕ್ಷಕ್ಕೆ ಜಿಗಿದಿದೆ. ಆರ್‌ಸಿಬಿ ಅಭಿಮಾನಿಗಳು ಈಗ ಅನನ್ಯಾ ಅವರನ್ನು ತಂಡದ ಹೊಸ ಅದೃಷ್ಟದ ದೇವತೆ ಎಂದು ಸಂಭ್ರಮಿಸುತ್ತಿದ್ದಾರೆ.

‘ಈ ಸಲ ಕಪ್ ನಮ್ದು’ ಎಂದು ವೈರಲ್
ಇತ್ತೀಚೆಗೆ ಅನನ್ಯಾ ಬಿರ್ಲಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆರ್‌ಸಿಬಿ ಲೋಗೋ ಜೊತೆಗೆ ‘ಈ ಸಲ ಕಪ್ ನಮ್ದು, ಲೆಟ್ಸ್ ಗೋ’ ಎಂದು ವಿಡಿಯೋ ಪೋಸ್ಟ್ ಮಾಡಿರುವುದು ಭಾರಿ ವೈರಲ್ ಆಗಿದೆ. ಈ ಪೋಸ್ಟ್ ತಂಡದ ಅಭಿಮಾನಿಗಳಲ್ಲಿ ಹೊಸ ಚೈತನ್ಯ ತುಂಬಿದ್ದು, ಅನನ್ಯಾ ಅವರ ಕ್ರಿಕೆಟ್ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಕೇವಲ ಉದ್ಯಮ ವಲಯಕ್ಕೆ ಸೀಮಿತವಾಗಿದ್ದ ಬಿರ್ಲಾ ಕುಟುಂಬದ ಹೆಸರು ಈಗ ಬೆಂಗಳೂರಿನ ಪ್ರತಿ ಗಲ್ಲಿಯಲ್ಲೂ ಮೊಳಗುತ್ತಿದೆ. ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಅರ್ಪಿಸಿರುವ ಅವರು, “ನಿಮ್ಮ ಪ್ರೀತಿ ಮತ್ತು ಹಾರೈಕೆಗಳ ಫಲವಾಗಿ ನಾವು ಖಂಡಿತವಾಗಿಯೂ ಈ ಬಾರಿ ಸಾಧನೆ ಮಾಡುತ್ತೇವೆ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾವ್ಯಾ ಮಾರನ್‌ಗೆ ಟಕ್ಕರ್
ಜಾಲತಾಣಗಳಲ್ಲಿ ಈಗ ಸನ್‌ರೈಸರ್ಸ್ ಹೈದರಾಬಾದ್ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಮತ್ತು ಅನನ್ಯಾ ಬಿರ್ಲಾ ನಡುವೆ ಹೋಲಿಕೆ ಶುರುವಾಗಿದೆ. ಕಾವ್ಯಾ ಮಾರನ್ ಅವರು ಎಸ್‌ಆರ್‌ಎಚ್ ತಂಡದ ಪಬ್ಲಿಕ್ ಫೇಸ್ ಆಗಿರುವಂತೆ, ಅನನ್ಯಾ ಕೂಡ ಆರ್‌ಸಿಬಿಯ ಗ್ಲಾಮರ್ ಐಕಾನ್ ಆಗಲಿದ್ದಾರಾ ಎಂಬ ಚರ್ಚೆ ಜೋರಾಗಿದೆ. ಆರ್‌ಸಿಬಿ ಲೋಗೋ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿರುವ ಅನನ್ಯಾ, ಈಗಾಗಲೇ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. 

ಸಹೋದರನಿಗೆ ಅನನ್ಯಾ ಶುಭ ಹಾರೈಕೆ
ಆರ್‌ಸಿಬಿ ಖರೀದಿಸಿದ ಒಕ್ಕೂಟದ ಅಧ್ಯಕ್ಷರಾಗಿ ನೇಮಕಗೊಂಡಿರುವ ತಮ್ಮ ಸಹೋದರ ಆರ್ಯಮಾನ್ ವಿಕ್ರಮ್ ಬಿರ್ಲಾ ಅವರಿಗೆ ಅನನ್ಯಾ ಶುಭ ಹಾರೈಸಿದ್ದಾರೆ. “ನೀನು ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೀಯ ಎಂಬ ಹೆಮ್ಮೆ ನನಗಿದೆ, ನಾನು ಸದಾ ನಿನ್ನೊಂದಿಗಿರುವೆ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಈ ಒಕ್ಕೂಟದಲ್ಲಿ ಆದಿತ್ಯ ಬಿರ್ಲಾ ಸಮೂಹದ ಜೊತೆಗೆ ಬ್ಲಾಕ್‌ಸ್ಟೋನ್, ಟೈಮ್ಸ್ ಆಫ್ ಇಂಡಿಯಾ ಮತ್ತು ಬೋಲ್ಟ್ ವೆಂಚರ್ಸ್ ಪಾಲುದಾರರಾಗಿದ್ದು, ವೃತ್ತಿಪರ ಮ್ಯಾನೇಜ್‌ಮೆಂಟ್‌ನೊಂದಿಗೆ ತಂಡವನ್ನು ಮುನ್ನಡೆಸಲು ಸನ್ನದ್ಧರಾಗಿದ್ದಾರೆ.

Exit mobile version