ಟಿ20 ವಿಶ್ವಕಪ್ 2026: ಅಭಿಷೇಕ್ ಶರ್ಮಾ ಹ್ಯಾಟ್ರಿಕ್ ಡಕ್‌ಔಟ್..ಟೀಂ ಇಂಡಿಯಾಗೆ ತಲೆನೋವು

Untitled design 2026 02 18T204800.850

ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಗ್ರೂಪ್ ಹಂತದ 36ನೇ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಿವೆ. ಟೂರ್ನಿಯ ಈ ಹಂತದಲ್ಲಿ ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದ್ದು, ಸೂಪರ್ 8 ಸುತ್ತಿನತ್ತ ಕಣ್ಣು ನೆಟ್ಟಿರುವ ಭಾರತ ತಂಡ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದೆ.

ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಎಡಗೈ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಕ್ರೀಸ್‌ಗೆ ಬಂದರು. ಅಭಿಮಾನಿಗಳ ನಿರೀಕ್ಷೆ ಏರಿದ ಕ್ಷಣಗಳಲ್ಲಿ, ಅಭಿಷೇಕ್ ಶರ್ಮಾ ಮತ್ತೊಮ್ಮೆ ನಿರಾಶೆ ಮೂಡಿಸಿದರು.

ಮೊದಲ ಓವರ್‌ನಲ್ಲೇ ವಿಕೆಟ್

ನೆದರ್ಲೆಂಡ್ಸ್ ಪರ ಬೌಲಿಂಗ್ ಆರಂಭಿಸಿದ ಆರ್ಯನ್ ದತ್ ಅವರ ಮೊದಲ ಓವರ್‌ನ ಮೂರನೇ ಎಸೆತದಲ್ಲೇ ಅಭಿಷೇಕ್ ಶರ್ಮಾ ಕ್ಲೀನ್ ಬೌಲ್ಡ್ ಆದರು. ಮೊದಲ ಎರಡು ಎಸೆತಗಳಲ್ಲಿ ರನ್ ಪಡೆಯದೇ ಇದ್ದ ಅವರು, ಮೂರನೇ ಎಸೆತದಲ್ಲಿ ಬ್ಯಾಟ್ ಮತ್ತು ಪ್ಯಾಡ್ ಮಧ್ಯೆ ಅಂತರ ಬಿಟ್ಟು ವಿಕೆಟ್ ಒಪ್ಪಿಸಿದರು. ಕೇವಲ ಮೂರು ಎಸೆತಗಳಲ್ಲಿ ಪೆವಿಲಿಯನ್ ಸೇರಿದ ಅವರು ಮತ್ತೊಮ್ಮೆ ಶೂನ್ಯಕ್ಕೆ ಔಟಾದರು.

ಈ ಮೂಲಕ ಟೂರ್ನಿಯಲ್ಲಿ ಅವರು ಆಡಿದ ಮೂರು ಪಂದ್ಯಗಳಲ್ಲೂ ಡಕ್‌ಔಟ್ ಆಗುವ ಮೂಲಕ ಹ್ಯಾಟ್ರಿಕ್ ಶೂನ್ಯ ಸಾಧಿಸಿದ್ದಾರೆ..

ಹಿಂದಿನ ಪಂದ್ಯಗಳಲ್ಲೂ ವಿಫಲ

ಅಭಿಷೇಕ್ ಶರ್ಮಾ ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಕಣಕ್ಕಿಳಿದಾಗ ಮೊದಲೇ ಬಾಲ್‌ಗೆ ಕ್ಯಾಚ್ ನೀಡಿ ಗೋಲ್ಡನ್ ಡಕ್‌ಔಟ್ ಆಗಿದ್ದರು. ಬಳಿಕ ಹೊಟ್ಟೆ ನೋವಿನ ಕಾರಣದಿಂದ ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಲಭ್ಯರಾಗಲಿಲ್ಲ. ನಂತರ ಪಾಕಿಸ್ತಾನ ವಿರುದ್ಧ ಕಣಕ್ಕಿಳಿದ ಅವರು ನಾಲ್ಕು ಎಸೆತಗಳನ್ನು ಎದುರಿಸಿ ಸಲ್ಮಾನ್ ಅಲಿ ಆಘಾ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಔಟಾದರು. ಇದೀಗ ನೆದರ್ಲೆಂಡ್ಸ್ ವಿರುದ್ಧವೂ ಶೂನ್ಯಕ್ಕೆ ಔಟಾಗಿದ್ದಾರೆ..

ಟಿ20 ಮಾದರಿಯಲ್ಲಿ ಆರಂಭಿಕರ ಪಾತ್ರ ಅತ್ಯಂತ ಮಹತ್ವದ್ದು. ಪವರ್‌ಪ್ಲೇ ಅವಧಿಯಲ್ಲಿ ವೇಗವಾಗಿ ರನ್ ಗಳಿಸುವುದು ತಂಡದ ಒಟ್ಟು ಮೊತ್ತದ ಮೇಲೆ ಪ್ರಭಾವ ಬೀರುತ್ತದೆ. ಅಭಿಷೇಕ್ ಶರ್ಮಾ ನಿರಂತರ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ, ತಂಡ ನಿರ್ವಹಣೆ ಮುಂದಿನ ಪಂದ್ಯಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಸೂಪರ್ 8 ಹಂತದ ಮುನ್ನ ಭಾರತ ತಂಡ ತಂತ್ರಜ್ಞಾನದ ದೃಷ್ಟಿಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಫಾರ್ಮ್‌ನಲ್ಲಿ ಇಲ್ಲದ ಆಟಗಾರನಿಗೆ ಮತ್ತಷ್ಟು ಅವಕಾಶ ನೀಡಬೇಕೇ, ಅಥವಾ ಪರ್ಯಾಯ ಆಟಗಾರರನ್ನು ಪ್ರಯೋಗಿಸಬೇಕೇ ಎಂಬ ಪ್ರಶ್ನೆ ಎದುರಾಗಿದೆ.

ಅಭಿಮಾನಿಗಳ ನಿರೀಕ್ಷೆ

ಅಭಿಷೇಕ್ ಶರ್ಮಾ ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡಕ್ಕೆ ಪ್ರವೇಶ ಪಡೆದಿದ್ದರು. ಅವರ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನ ಇಲ್ಲ. ಆದರೆ ವಿಶ್ವಕಪ್‌ನಂತಹ ಮಹತ್ವದ ಟೂರ್ನಿಯಲ್ಲಿ ಒತ್ತಡವನ್ನು ನಿಭಾಯಿಸುವುದು ಮುಖ್ಯ.

Exit mobile version