ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಜನ್ಮಸಂಖ್ಯೆಯು ಅವರ ವ್ಯಕ್ತಿತ್ವ, ನಿರ್ಧಾರಗಳು, ಆರ್ಥಿಕ ಪರಿಸ್ಥಿತಿ, ವೃತ್ತಿಜೀವನ ಮತ್ತು ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ. ಜನವರಿ 24ರ ಶನಿವಾರದ ದಿನಕ್ಕೆ ಸಂಬಂಧಿಸಿದಂತೆ, ಜನ್ಮಸಂಖ್ಯೆ 1 ರಿಂದ 9ರವರೆಗೆ ಇರುವವರ ದಿನಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ವಿವರವಾಗಿ ತಿಳಿದುಕೊಳ್ಳಬಹುದು. ನಿಮ್ಮ ದಿನವನ್ನು ಸಮರ್ಥವಾಗಿ ಯೋಜಿಸಿಕೊಳ್ಳಲು ಈ ಭವಿಷ್ಯ ಸಹಾಯಕವಾಗಲಿದೆ.
ಜನ್ಮಸಂಖ್ಯೆ 1 (1, 10, 19, 28ರಂದು ಜನಿಸಿದವರು)
ಇಂದು ನಿಮ್ಮ ನಿರ್ಧಾರಗಳ ಬಗ್ಗೆ ಆತ್ಮವಿಶ್ವಾಸ ಇರಲಿದೆ. ಆದರೆ ಅತಿಯಾದ ಆತುರ ಅಥವಾ ಒತ್ತಡದ ನಿರ್ಧಾರಗಳು ಸಮಸ್ಯೆ ಉಂಟುಮಾಡಬಹುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಸಹೋದ್ಯೋಗಿಗಳೊಂದಿಗೆ ಮಾತಿನ ಚಕಮಕಿ ತಪ್ಪಿಸಿ, ಶಾಂತವಾಗಿ ವರ್ತಿಸುವುದು ಒಳಿತು. ಉದ್ಯೋಗ ಬದಲಾವಣೆಯ ಯೋಚನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಎಲ್ಲ ಆಯ್ಕೆಗಳನ್ನೂ ಪರಿಗಣಿಸಿ.
ಜನ್ಮಸಂಖ್ಯೆ 2 (2, 11, 20, 29ರಂದು ಜನಿಸಿದವರು)
ಇಂದು ಪ್ರತಿಯೊಂದು ನಿರ್ಧಾರಕ್ಕೂ ಮುನ್ನ ನಾಲ್ಕು ಬಾರಿ ಯೋಚಿಸುವುದು ಉತ್ತಮ. ನೇರವಾಗಿ ಮಾತನಾಡುವ ಸ್ವಭಾವದಿಂದಾಗಿ ಇತರರಿಗೆ ನೋವುಂಟಾಗಬಹುದು. ಸಾಮಾಜಿಕವಾಗಿ ಹೆಚ್ಚು ತೊಡಗಿಸಿಕೊಳ್ಳುವ ಸಂದರ್ಭ ಬರುತ್ತದೆ. ನಿಮ್ಮ ಮಾತು ಮತ್ತು ನಡೆ ವರ್ಚಸ್ಸಿಗೆ ತಕ್ಕಂತೆ ಇರಲಿ. ಶಾಂತ ಮತ್ತು ಸಮತೋಲನದ ವರ್ತನೆ ನಿಮ್ಮ ಯಶಸ್ಸಿನ ಗುಟ್ಟು.
ಜನ್ಮಸಂಖ್ಯೆ 3 (3, 12, 21, 30ರಂದು ಜನಿಸಿದವರು)
ಇಂದು ಕೀರ್ತಿ ಮತ್ತು ಪ್ರತಿಷ್ಠೆ ಹೆಚ್ಚಾಗುವ ದಿನ. ಸಮಯೋಚಿತವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮ ಫಲ ನೀಡುತ್ತವೆ. ಹಣ ಹೂಡಿಕೆ, ಎಫ್‌ಡಿ, ಆರ್‌ಡಿ ಬಗ್ಗೆ ಯೋಚನೆ ಮಾಡಬಹುದು. ರಾಜಕೀಯ ಹಾಗೂ ನಾಯಕತ್ವ ಕ್ಷೇತ್ರದಲ್ಲಿರುವವರಿಗೆ ಮಹತ್ವದ ಅವಕಾಶಗಳು ಲಭಿಸುತ್ತವೆ. ಕಠಿಣ ವಿಷಯಗಳನ್ನು ಸರಳವಾಗಿ ವಿವರಿಸುವ ನಿಮ್ಮ ಸಾಮರ್ಥ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಜನ್ಮಸಂಖ್ಯೆ 4 (4, 13, 22, 31ರಂದು ಜನಿಸಿದವರು)
ಇಂದು ಆರೋಪಗಳು ಹಾಗೂ ತಪ್ಪು ಅರ್ಥೈಸಿಕೊಳ್ಳುವ ಸಂದರ್ಭ ಎದುರಾಗಬಹುದು. ನೀವು ನೀಡುವ ಸಮಜಾಯಿಷಿಯನ್ನು ಇತರರು ಸ್ವೀಕರಿಸುವ ಸಾಧ್ಯತೆ ಕಡಿಮೆ. ಸಂಬಂಧಿಕರಿಂದ ಆರ್ಥಿಕ ವಿಷಯಗಳ ಬಗ್ಗೆ ಟೀಕೆ ಎದುರಾಗಬಹುದು. ಇಂತಹ ಸಂದರ್ಭದಲ್ಲಿ ಮನಸ್ಸನ್ನು ಸ್ಥಿರವಾಗಿಟ್ಟುಕೊಂಡು ಮುಂದೆ ಸಾಗುವುದು ಒಳಿತು. ಅನಗತ್ಯ ಚಿಂತೆಗಳಿಂದ ದೂರವಿರಿ.
ಜನ್ಮಸಂಖ್ಯೆ 5 (5, 14, 23ರಂದು ಜನಿಸಿದವರು)
ತಂದೆ-ತಾಯಿಯ ಆಶೀರ್ವಾದದಿಂದ ಯಶಸ್ಸು ನಿಮ್ಮ ಪಾಲಿಗೆ ಲಭಿಸಲಿದೆ. ಹೊಸ ಜವಾಬ್ದಾರಿಗಳು ಹಾಗೂ ನಾಯಕತ್ವದ ಅವಕಾಶಗಳು ದೊರೆಯಲಿವೆ. ಮನೆ ಅಲಂಕಾರಕ್ಕೆ ಸಂಬಂಧಿಸಿದ ಖರ್ಚು ಆಗಬಹುದು. ಧೈರ್ಯವಾಗಿ ಮುಂದುವರಿದರೆ ದೀರ್ಘಾವಧಿಯಲ್ಲಿ ಲಾಭವಾಗಲಿದೆ.
ಜನ್ಮಸಂಖ್ಯೆ 6 (6, 15, 24ರಂದು ಜನಿಸಿದವರು)
ಬ್ಯಾಂಕ್ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಮನೆ ನಿರ್ಮಾಣ ಅಥವಾ ದೊಡ್ಡ ಖರ್ಚುಗಳು ಹಣಕಾಸಿನ ಒತ್ತಡ ಹೆಚ್ಚಿಸಬಹುದು. ಇತರರ ಒತ್ತಡಕ್ಕೆ ಮಣಿದು ಯಾವುದೇ ಹೊಸ ಪ್ರಾಜೆಕ್ಟ್ ಸ್ವೀಕರಿಸಬೇಡಿ. ನಿಮಗೆ ಸರಿ ಎಂದು ಅನಿಸುವ ತನಕ ತೀರ್ಮಾನವನ್ನು ಮುಂದೂಡುವುದು ಒಳಿತು.
ಜನ್ಮಸಂಖ್ಯೆ 7 (7, 16, 25ರಂದು ಜನಿಸಿದವರು)
ಏಕಾಗ್ರತೆ ಮುಖ್ಯ. ಒಂದೇ ಸಮಯದಲ್ಲಿ ಅನೇಕ ವಿಷಯಗಳ ಬಗ್ಗೆ ಯೋಚಿಸುವುದು ತಪ್ಪುಗಳಿಗೆ ಕಾರಣವಾಗಬಹುದು. ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯಲ್ಲಿ ಜಾಗ್ರತೆ ಅಗತ್ಯ. ಚಾರ್ಜಿಂಗ್ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸಿ.
ಜನ್ಮಸಂಖ್ಯೆ 8 (8, 17, 26ರಂದು ಜನಿಸಿದವರು)
ಪ್ರಯಾಣದಿಂದ ಶುಭ ಸುದ್ದಿ ದೊರೆಯುವ ಸಾಧ್ಯತೆ ಇದೆ. ಹಣ ಹೂಡಿಕೆ ಹಾಗೂ ಉಳಿತಾಯದ ಬಗ್ಗೆ ಗಂಭೀರ ಚಿಂತನೆ ಮಾಡುತ್ತೀರಿ. ಆರ್ಥಿಕವಾಗಿ ಬಲವಾಗುವ ದಿನವಾಗಿರಲಿದೆ.
ಜನ್ಮಸಂಖ್ಯೆ 9 (9, 18, 27ರಂದು ಜನಿಸಿದವರು)
ಸಾಲ, ಅಡಮಾನ ಹಾಗೂ ಜಾಮೀನು ವಿಷಯಗಳಲ್ಲಿ ತುಂಬ ಎಚ್ಚರಿಕೆ ಅಗತ್ಯ. ಕೆಲಸದ ಒತ್ತಡ ಹೆಚ್ಚಾಗಬಹುದು. ಇತರರಿಗೆ ಹೆಚ್ಚು ಸಲುಗೆ ನೀಡುವುದು ಮುಂದಿನ ದಿನಗಳಲ್ಲಿ ಸಮಸ್ಯೆಗೆ ಕಾರಣವಾಗಬಹುದು.
