ಇಂದಿನಿಂದ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ: ನರಕ ಚತುರ್ದಶಿಯ ಹಿನ್ನೆಲೆ ತಿಳಿಯಿರಿ

Untitled design 2025 10 20t070114.740

ಕರ್ನಾಟಕದಾದ್ಯಂತ ಇಂದಿನಿಂದ ದೀಪಾವಳಿ ಹಬ್ಬದ ಭರದ ಸಂಭ್ರಮ ಆರಂಭವಾಗಿದೆ. ಬೆಳಕಿನ ಹಬ್ಬವೆಂದು ಕರೆಯಲ್ಪಡುವ ಈ ದೀಪಾವಳಿ, ಮಕ್ಕಳಿಗೆ ಖಾಸಗಿ ಫೇವರೇಟ್. ಪಟಾಕಿಗಳ ಸಿಹಿ, ಸಿಹಿಗಳ ರುಚಿ, ಕುಟುಂಬದ ಒಟ್ಟಿಗೆ ಆಚರಣೆ ಎಲ್ಲವೂ ಸಂಪೂರ್ಣ ಸಂತೋಷ ನೀಡಲಿದೆ. ಮಕ್ಕಳಿಂದ ದೊಡ್ಡವರವರೆಗೂ ಇಷ್ಟಪಡುವ ಈ ಹಬ್ಬವನ್ನು ಕರ್ನಾಟಕದಲ್ಲಿ ಮೂರು ದಿನಗಳ ಕಾಲ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಪ್ರತಿದಿನಕ್ಕೂ ತನ್ನದೇ ಆದ ಧಾರ್ಮಿಕ ಮಹತ್ವ, ಪೌರಾಣಿಕ ಹಿನ್ನೆಲೆ ಇದೆ.

ಮೊದಲನೇ ದಿನ ನರಕ ಚತುರ್ದಶಿ

ದೀಪಾವಳಿಯ ಮೊದಲ ದಿನವನ್ನು ನರಕ ಚತುರ್ದಶಿ ಅಥವಾ ಚತುರ್ದಶಿ ಹಬ್ಬ ಎಂದು ಕರೆಯಲಾಗುತ್ತದೆ. ಈ ದಿನದ ಮುಂಚಿನ ದಿನವನ್ನು ಮಲೆನಾಡು ಪ್ರದೇಶದಲ್ಲಿ ಬೂರೆ ಹಬ್ಬ ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ ಮನೆಗಳಲ್ಲಿ ಬಾವಿ, ಹಂಡೆಗಳಿಗೆ ಪೂಜೆ ಮಾಡಿ ಹೊಸ ನೀರು ತುಂಬುತ್ತಾರೆ.

ಪೌರಾಣಿಕ ಕಥೆಯ ಪ್ರಕಾರ, ನರಕಾಸುರ ಎಂಬ ದೈತ್ಯನು ದೇವತೆಗಳು ಮತ್ತು ಮನುಷ್ಯರನ್ನು ಕಂಗೆಡಿಸುತ್ತಿದ್ದ. ಅಂತಹ ದುಷ್ಟನ ವಧೆಯನ್ನು ಶ್ರೀಕೃಷ್ಣ ಈ ದಿನ ಮಾಡಿದ್ದಾರೆ ಎನ್ನಲಾಗಿದೆ. ನರಕಾಸುರನ ನಾಶವನ್ನು ಸ್ಮರಿಸಲು ಈ ದಿನವನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ.

ಈ ದಿನ ಎಣ್ಣೆ ಸ್ನಾನ ಮಾಡುವುದು ಅತ್ಯಂತ ಮುಖ್ಯವಾದ ಸಂಪ್ರದಾಯ. ಕಥೆಯ ಪ್ರಕಾರ, ನರಕಾಸುರನ ರಕ್ತದಿಂದ ತಲುಪಿದ ಮಲಿನತೆಯನ್ನು ನಿವಾರಿಸಲು ಕೃಷ್ಣನು ಎಣ್ಣೆ ಸ್ನಾನ ಮಾಡಿದನು ಎನ್ನಲಾಗುತ್ತದೆ. ಹೀಗಾಗಿ, ನರಕ ಚತುರ್ದಶಿಯಂದು ಬೆಳಗ್ಗೆ ಎಣ್ಣೆ ಹಚ್ಚಿ ಸ್ನಾನ ಮಾಡುವ ಪದ್ಧತಿ ಮನೆಮನೆಗಳಲ್ಲಿ ಕಾಣಬಹುದು.

ಎರಡನೇ ದಿನ ಲಕ್ಷ್ಮಿ ಪೂಜೆ

ದೀಪಾವಳಿಯ ಎರಡನೇ ದಿನ ಅಮಾವಾಸ್ಯೆಯ ದಿನವಾಗಿದ್ದು, ಈ ದಿನ ಲಕ್ಷ್ಮಿ ಪೂಜೆ ಅತ್ಯಂತ ಮಹತ್ವ ಪಡೆದಿದೆ. ಈ ದಿನ ಮನೆಗಳಲ್ಲಿ ಬೆಳಕು ಹಚ್ಚಿ, ದೇವಿಯ ಆರಾಧನೆ ಮಾಡುವುದರಿಂದ ಸಂಪತ್ತು, ಸಮೃದ್ಧಿ, ಶಾಂತಿ ಬರಲು ಸಾಧ್ಯವೆಂಬ ನಂಬಿಕೆ ಇದೆ.

ವ್ಯಾಪಾರಸ್ಥರು ಈ ದಿನ ತಮ್ಮ ಅಂಗಡಿಗಳಲ್ಲಿ ಅಂಗಡಿ ಪೂಜೆ ಮಾಡುತ್ತಾರೆ. ಹೊಸ ಹಾಳೆ, ಹೊಸ ಖಾತೆಪುಸ್ತಕಗಳನ್ನು ಆರಂಭಿಸುವ ಪದ್ಧತಿ ಇದೆ. ಈ ದಿನ ಬೆಳಕು ಮತ್ತು ಧನದ ದೇವಿ ಲಕ್ಷ್ಮಿ ಮನೆಗೆ ಆಗಮನಿಸುತ್ತಾಳೆ ಎಂಬ ಭಾವನೆ ಇರುವುದರಿಂದ, ಮನೆಗಳನ್ನು ಸ್ವಚ್ಛಗೊಳಿಸಿ ದೀಪಗಳಿಂದ ಅಲಂಕರಿಸಲಾಗುತ್ತದೆ.

ಮೂರನೇ ದಿನ ಬಲಿಪಾಡ್ಯಮಿ

ದೀಪಾವಳಿಯ ಮೂರನೇ ದಿನ ಬಲಿಪಾಡ್ಯಮಿ ಅಥವಾ ಗೋವರ್ಧನ ಪೂಜೆ ದಿನ. ಈ ದಿನ ದಾನವ ಅರಸನಾದ ಮಹಾಬಲಿ ಅಥವಾ ಬಲೀಂದ್ರನ ಪೂಜೆಯನ್ನು ಮಾಡಲಾಗುತ್ತದೆ.

ಪೌರಾಣಿಕ ಕಥೆಯ ಪ್ರಕಾರ, ಮಹಾಬಲಿ ಅತ್ಯಂತ ನ್ಯಾಯಪ್ರಿಯ ಹಾಗೂ ಜನಹಿತದಾಯಕ ರಾಜನಾಗಿದ್ದ. ಅವನು ದೇವತೆಗಳನ್ನೂ ಗೆದ್ದು ಮೂರು ಲೋಕಗಳನ್ನು ಆಳುತ್ತಿದ್ದ. ದೇವತೆಗಳು ವಿಷ್ಣುವಿನ ಮೊರೆ ಹೋದಾಗ, ವಿಷ್ಣು ವಾಮನ ಅವತಾರ ತಾಳಿ ಬಲಿಯ ಮುಂದೆ ಪ್ರತ್ಯಕ್ಷನಾದನು. ವಾಮನು “ಮೂರು ಹೆಜ್ಜೆ ಜಾಗ ಕೊಡು” ಎಂದು ಕೇಳಿದಾಗ, ಬಲಿ ತಕ್ಷಣ ಒಪ್ಪಿಕೊಂಡ. ಆದರೆ ವಾಮನ ರೂಪದಲ್ಲಿದ್ದ ವಿಷ್ಣು ಬ್ರಹ್ಮಾಂಡವನ್ನೆ ಅಳೆಯುವಷ್ಟು ದೊಡ್ಡನಾದನು. ಮೊದಲ ಹೆಜ್ಜೆಯಿಂದ ಭೂಮಿಯನ್ನೂ, ಎರಡನೇ ಹೆಜ್ಜೆಯಿಂದ ಆಕಾಶವನ್ನೂ ಅಳೆದು, ಮೂರನೇ ಹೆಜ್ಜೆಗೆ ಬಲಿಯ ತಲೆಯನ್ನೇ ನೀಡುವಂತೆ ಕೇಳಿದನು. ಬಲಿಯು ವಿನಮ್ರತೆಯಿಂದ ತಲೆಯನ್ನೊಡ್ಡಿದನು.

ವಿಷ್ಣು ಬಲಿಯ ಭಕ್ತಿಗೆ ಮೆಚ್ಚಿ, ಅವನಿಗೆ ಪಾತಾಳ ರಾಜ್ಯ ನೀಡಿದನು. ಜೊತೆಗೆ ಕಾರ್ತಿಕ ಮಾಸದ ಬಲಿಪಾಡ್ಯಮಿ ದಿನದಂದು ಭೂಮಿಗೆ ಬಂದು ಜನರಿಂದ ಪೂಜೆ ಸ್ವೀಕರಿಸು ಎಂಬ ವರವನ್ನು ನೀಡಿದನು. ಹೀಗಾಗಿ ಬಲಿಪಾಡ್ಯಮಿಯಂದು ಬಲೀಂದ್ರನ ಆರಾಧನೆ ನಡೆಯುತ್ತದೆ.

ಇದೇ ದಿನ ಶ್ರೀರಾಮನು 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ದಿನವೆಂದು ಸಹ ಹೇಳಲಾಗುತ್ತದೆ. ಅಯೋಧ್ಯಾ ನಾಗರಿಕರು ಆ ದಿನ ಬೆಳಕಿನ ದೀಪಗಳಿಂದ ನಗರವನ್ನೆಲ್ಲ ಬೆಳಗಿಸಿ ಸ್ವಾಗತ ಮಾಡಿದರು. ಅಂದಿನಿಂದಲೇ ದೀಪಾವಳಿಯನ್ನು ಬೆಳಕಿನ ಹಬ್ಬವೆಂದು ಆಚರಿಸಲಾಗುತ್ತಿದೆ.

Exit mobile version