ವಿಶ್ವದಾದ್ಯಂತ ಗಣೇಶನ ಆರಾಧನೆ..ಯಾವ ದೇಶದಲ್ಲಿ ಯಾವ ರೀತಿಯ ಆಚರಣೆಗಳಿವೆ?

 

ಗಣಪತಿ, ಹಿಂದೂ ಧರ್ಮದಲ್ಲಿ ವಿಘ್ನವಿನಾಶಕ, ಜ್ಞಾನದ ದೇವತೆ ಮತ್ತು ಯಶಸ್ಸಿನ ಸಂಕೇತವಾಗಿ ಆರಾಧಿಸಲ್ಪಡುವ ದೇವರು. ಶಿವ-ಪಾರ್ವತಿಯ ಸುತನಾದ ಗಣೇಶನನ್ನು ಎಲ್ಲ ಕಾರ್ಯಗಳ ಆರಂಭದಲ್ಲಿ ಪೂಜಿಸಲಾಗುತ್ತದೆ. ಏಕೆಂದರೆ ಗಣಪನು ವಿಘ್ನಗಳನ್ನು ನಿವಾರಿಸಿ, ಕಾರ್ಯಸಿದ್ಧಿಯನ್ನು ನೀಡುತ್ತಾನೆ ಎಂಬ ನಂಬಿಕೆ ಜನರಲ್ಲಿದೆ.

ಗಣೇಶನನ್ನು ಬುದ್ಧಿ, ಜ್ಞಾನ, ಮತ್ತು ಸಮೃದ್ಧಿಯ ದೇವರೆಂದು ಭಾವಿಸಲಾಗುತ್ತದೆ. ಆತನ ದೊಡ್ಡ ತಲೆ ಜ್ಞಾನವನ್ನು, ದೊಡ್ಡ ಕಿವಿಗಳು ಶ್ರವಣ ಶಕ್ತಿಯನ್ನು, ಸಣ್ಣ ಕಣ್ಣುಗಳು ತೀಕ್ಷ್ಣ ದೃಷ್ಟಿಯನ್ನು, ಮತ್ತು ದೊಡ್ಡ ಹೊಟ್ಟೆ ಎಲ್ಲವನ್ನೂ ಸ್ವೀಕರಿಸುವ ಶಕ್ತಿಯನ್ನು ಸಂಕೇತಿಸುತ್ತವೆ. ಆತನ ಮೂಷಿಕ ವಾಹನವು ಚಿಕ್ಕದಾದರೂ ದೊಡ್ಡ ಕಾರ್ಯಗಳನ್ನು ಸಾಧಿಸುವ ಶಕ್ತಿಯನ್ನು ತೋರಿಸುತ್ತದೆ.

ಗಣೇಶನ ಆರಾಧನೆಯು ಭಾರತದಾದ್ಯಂತ ಮಾತ್ರವಲ್ಲದೆ, ವಿಶ್ವದ ಹಲವು ದೇಶಗಳಲ್ಲಿ ವಿಶೇಷವಾಗಿ ನಡೆಯುತ್ತದೆ. ಈ ಲೇಖನದಲ್ಲಿ ಗಣಪತಿಯ ನಂಬಿಕೆ ಮತ್ತು ಆರಾಧನೆಯ ಬಗ್ಗೆ ವಿವರವಾಗಿ ತಿಳಿಯೋಣ. ಥೈಲ್ಯಾಂಡ್‌ನಲ್ಲಿ ವಿಶ್ವದ ಅತಿ ಎತ್ತರದ ಗಣೇಶ ಪ್ರತಿಮೆ ಇದೆ, ಈ ದೇವರ ಜಾಗತಿಕ ಮಹತ್ವ ಎಷ್ಟಿರಬಹುದು ಎಂದು ಊಹಿಸಿ! ಯಾವೆಲ್ಲ ದೇಶಗಳಲ್ಲಿ ಗಣೇಶನನ್ನು ಆರಾಧಿಸಲಾಗುತ್ತದೆ ಎಂಬುದರ ಕುರಿತು ಇಲ್ಲಿ ಒಂದಿಷ್ಟು ಮಾಹಿತಿ.

ಥೈಲ್ಯಾಂಡ್:

ಥೈಲ್ಯಾಂಡ್‌ನಲ್ಲಿ ಗಣೇಶನನ್ನು ‘ಫ್ರಾ ಫಿಕಾನೆಟ್’ ಎಂದು ಕರೆಯಲಾಗುತ್ತದೆ. ಇಲ್ಲಿ ವಿಶ್ವದ ಅತಿ ಎತ್ತರದ ಗಣೇಶ ಪ್ರತಿಮೆ ಇದ್ದು, ಜನರು ಆತನನ್ನು ಯಶಸ್ಸು ಮತ್ತು ಅದೃಷ್ಟದ ದೇವತೆಯಾಗಿ ಪೂಜಿಸುತ್ತಾರೆ. ಚಾಂಗ್‌ವಾಟ್‌ನ ಗಣೇಶ ದೇವಾಲಯ ಸೇರಿದಂತೆ ದೇಶಾದ್ಯಂತ ಹಲವು ದೇವಾಲಯಗಳು ಗಣಪತಿಗೆ ಮೀಸಲಾಗಿವೆ.

ನೇಪಾಳ

ನೇಪಾಳದಲ್ಲಿ ಗಣೇಶನನ್ನು ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ. ಹೊಸ ಉದ್ಯಮಗಳನ್ನು ಆರಂಭಿಸುವ ಮೊದಲು ಮತ್ತು ಹಬ್ಬಗಳ ಸಂದರ್ಭದಲ್ಲಿ ಗಣಪತಿಯನ್ನು ವಿಘ್ನನಿವಾರಕನಾಗಿ ಆರಾಧಿಸಲಾಗುತ್ತದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ದೇವಾಲಯಗಳು ಭಕ್ತರಿಂದ ತುಂಬಿರುತ್ತವೆ. ಕಾಠ್ಮಂಡುವಿನ ಹಲವು ದೇವಸ್ಥಾನಗಳಲ್ಲಿ ಗಣೇಶನ ಮೂರ್ತಿಗಳನ್ನು ಕಾಣಬಹುದು.

ಕಾಂಬೋಡಿಯಾ

ಕಾಂಬೋಡಿಯಾದಲ್ಲಿ ಗಣೇಶನನ್ನು ಹಿಂದೂ ದೇವತೆಯಾಗಿ ಆರಾಧಿಸಲಾಗುತ್ತದೆ. ಅಂಕೋರ್ ವಾಟ್‌ನಂತಹ ಪ್ರಾಚೀನ ದೇವಾಲಯಗಳಲ್ಲಿ ಗಣೇಶನ ಪ್ರತಿಮೆಗಳು ಕಂಡುಬರುತ್ತವೆ. ಸಮೃದ್ಧಿ ಮತ್ತು ಯಶಸ್ಸಿಗಾಗಿ ಜನರು ಆತನನ್ನು ಪೂಜಿಸುತ್ತಾರೆ, ವಿಶೇಷವಾಗಿ ವ್ಯಾಪಾರ ಆರಂಭದ ಸಂದರ್ಭಗಳಲ್ಲಿ.

ಇಂಡೋನೇಷಿಯಾ

ಇಂಡೋನೇಷಿಯಾದಲ್ಲಿ ಗಣೇಶನನ್ನು ಜ್ಞಾನ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಬಾಲಿಯ ಹಿಂದೂ ದೇವಾಲಯಗಳಲ್ಲಿ ಗಣೇಶನ ಮೂರ್ತಿಗಳು ಪ್ರಮುಖವಾಗಿವೆ. ಆಶ್ಚರ್ಯಕರವಾಗಿ, ಇಂಡೋನೇಷಿಯಾದ 20,000 ರೂಪಾಯಿಯ ನೋಟಿನ ಮೇಲೆ ಗಣೇಶನ ಚಿತ್ರವನ್ನು ಕಾಣಬಹುದು. ಇದು ಆತನ ಐತಿಹಾಸಿಕ ಮಹತ್ವವನ್ನು ತೋರಿಸುತ್ತದೆ.

ಜಪಾನ್

ಜಪಾನ್‌ನಲ್ಲಿ ಗಣೇಶನನ್ನು ‘ಕಾಂಗಿಟೆನ್’ ಎಂದು ಕರೆಯಲಾಗುತ್ತದೆ. ಇಲ್ಲಿ 250ಕ್ಕೂ ಹೆಚ್ಚು ದೇವಾಲಯಗಳು ಗಣೇಶನಿಗೆ ಮೀಸಲಾಗಿವೆ. ಜನರು ಆತನನ್ನು ಸಂತೋಷ ಮತ್ತು ಯಶಸ್ಸಿನ ದೇವರೆಂದು ಆರಾಧಿಸುತ್ತಾರೆ. ಗಣೇಶನ ಸಂಸ್ಕೃತಿಯ ಸಂಯೋಜನೆ ಜಪಾನಿನ ಬೌದ್ಧ ಸಂಪ್ರದಾಯದಲ್ಲಿ ಕಾಣಿಸುತ್ತದೆ.

ಮ್ಯಾನ್ಮಾರ್

ಮ್ಯಾನ್ಮಾರ್‌ನ ಶ್ವೇಸಂದವ್ ಪಗೋಡಾದಂತಹ ದೇವಾಲಯಗಳಲ್ಲಿ ಗಣೇಶನ ಪ್ರತಿಮೆಗಳನ್ನು ಪ್ರದರ್ಶಿಸಲಾಗುತ್ತದೆ. ಇಲ್ಲಿ ಆತನನ್ನು ವಿಘ್ನನಿವಾರಕನಾಗಿ ಮತ್ತು ಸ್ಥಳೀಯ ಬೌದ್ಧ ಸಂಪ್ರದಾಯಗಳ ಭಾಗವಾಗಿ ಆರಾಧಿಸಲಾಗುತ್ತದೆ.

ಪ್ರಪಂಚದ ಹಲವೆಡೆ, ಗಣೇಶನನ್ನು ಅತ್ಯಂತ ಭಕ್ತಿ ಮತ್ತು ಗೌರವದಲ್ಲಿ ಪೂಜೆ ನಡೆಸುತ್ತಾರೆ. ಪುರಾಣದ ಕಾಲದಿಂದಲೂ ಗಣೇಶನನ್ನು ಎಲ್ಲಡೆಯೂ ಸರ್ವವ್ಯಾಪಿಯಾಗಿ ಪೂಜಿಸುತ್ತಿದ್ದರು.

Exit mobile version