ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಹೃದಯಾಘಾತ: ಕುಸಿದು ಬಿದ್ದು ಯುವಕ ಸಾವು

Untitled design 2025 07 28t173352.829

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿದ್ದು, ಆಟದ ಮೈದಾನದಲ್ಲಿ ಅಥವಾ ಜಿಮ್‌ನಲ್ಲಿ ತೀವ್ರ ವ್ಯಾಯಾಮದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಗಳು ನಡೆದಿವೆ.  ಇದೀಗ ಮತ್ತೊಂದು ದುರಂತ ಘಟನೆ ಹೈದರಾಬಾದ್‌ನ ಉಪ್ಪಲ್ ಕ್ರೀಡಾಂಗಣದಲ್ಲಿ ನಡೆದಿದ್ದು, ಬ್ಯಾಡ್ಮಿಂಟನ್ ಆಡುತ್ತಿದ್ದ 25 ವರ್ಷದ ಯುವಕನೊಬ್ಬ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಮೃತಪಟ್ಟಿದ್ದಾನೆ. ಈ ಘಟನೆಯ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೃತ ಯುವಕನನ್ನು ಗುಂಡ್ಲಾ ರಾಕೇಶ್ (25) ಎಂದು ಗುರುತಿಸಲಾಗಿದೆ. ರಾಕೇಶ್, ಹೈದರಾಬಾದ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈತನಿಗೆ ಪ್ರತಿದಿನ ಬ್ಯಾಡ್ಮಿಂಟನ್ ಆಡುವ ಅಭ್ಯಾಸವಿತ್ತು. ಎಂದಿನಂತೆ ಭಾನುವಾರ ರಾತ್ರಿ ತನ್ನ ಸ್ನೇಹಿತರೊಂದಿಗೆ ಒಳಾಂಗಣ ಕೋರ್ಟ್‌ನಲ್ಲಿ ಶಟಲ್ ಕಾಕ್ ಆಡುತ್ತಿದ್ದಾಗ, ಏಕಾಏಕಿ ಎದೆನೋವಿನಿಂದ ಕುಸಿದುಬಿದ್ದಿದ್ದಾನೆ. ಆತನ ಸಹ ಆಟಗಾರರು ಮತ್ತು ಸ್ನೇಹಿತರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರು ಆತ ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿರುವುದಾಗಿ ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ, ಯುವ ಜನರಲ್ಲಿ, ವಿಶೇಷವಾಗಿ 40 ವರ್ಷದೊಳಗಿನವರಲ್ಲಿ ಹೃದಯಾಘಾತದಿಂದ ಮೃತಪಡುವ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿವೆ. ಕರ್ನಾಟಕದ ಹಾಸನ ಜಿಲ್ಲೆಯಂತಹ ಕೆಲವು ಪ್ರದೇಶಗಳಲ್ಲಿ ಈ ರೀತಿಯ ಘಟನೆಗಳು ಆಗಾಗ್ಗೆ ವರದಿಯಾಗುತ್ತಿವೆ.

ತಜ್ಞರ ಪ್ರಕಾರ, ಒತ್ತಡ, ಆರೋಗ್ಯಕರ ಆಹಾರದ ಕೊರತೆ, ಜೀವನಶೈಲಿಯ ಬದಲಾವಣೆ, ಮತ್ತು ದೈಹಿಕ ಚಟುವಟಿಕೆಯ ತೀವ್ರತೆಯು ಇಂತಹ ಘಟನೆಗಳಿಗೆ ಕಾರಣವಾಗಿರಬಹುದು.

Exit mobile version