ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ

Untitled design 2026 04 16T120237.028

ನವದೆಹಲಿ, ಏಪ್ರಿಲ್ 16: ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಸರ್ಕಾರವು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಿದೆ. ಮಹಿಳಾ ಮೀಸಲಾತಿ (ನಾರಿ ಶಕ್ತಿ ವಂದನ ಅಧಿನಿಯಮ), ಕ್ಷೇತ್ರ ಮರುವಿಂಗಡಣೆ (ಡೆಲಿಮಿಟೇಶನ್) ಮಸೂದೆ 2026, ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ 2026 ಅನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸದನದಲ್ಲಿ ಮಂಡಿಸಿದರು. ಈ ಮಸೂದೆಗಳು ದೇಶದ ಚುನಾವಣಾ ರಚನೆಯಲ್ಲೇ ವ್ಯಾಪಕ ಬದಲಾವಣೆ ತರುವ ಸಾಧ್ಯತೆಯಿದೆ.

ಮೂರು ಮಸೂದೆಗಳು ಏನನ್ನು ಹೇಳುತ್ತವೆ?

  1. ಮಹಿಳಾ ಮೀಸಲಾತಿ ಮಸೂದೆ (ನಾರಿ ಶಕ್ತಿ ವಂದನ ಅಧಿನಿಯಮ): ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಸ್ಥಾನಗಳನ್ನು ಮೀಸಲಾಗಿಡಲು ಪ್ರಸ್ತಾಪಿಸುತ್ತದೆ. 2029ರ ಸಾರ್ವತ್ರಿಕ ಚುನಾವಣೆಯ ವೇಳೆಗೆ ಇದನ್ನು ಜಾರಿಗೆ ತರುವ ಗುರಿ ಸರ್ಕಾರದ್ದು.

  2. ಕ್ಷೇತ್ರ ಮರುವಿಂಗಡಣೆ (ಡೆಲಿಮಿಟೇಶನ್) ಮಸೂದೆ 2026: ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು ಪ್ರಸ್ತುತ 543 ರಿಂದ 850ಕ್ಕೆ (815 ರಾಜ್ಯಗಳಿಂದ + 35 ಕೇಂದ್ರಾಡಳಿತ ಪ್ರದೇಶಗಳಿಂದ) ಹೆಚ್ಚಿಸಲು ಪ್ರಸ್ತಾಪ. ಇದೇ ರೀತಿ ರಾಜ್ಯ ವಿಧಾನಸಭೆಗಳ ಸ್ಥಾನಗಳನ್ನೂ ವಿಸ್ತರಿಸಲಾಗುವುದು. 2002ರ ಹಳೆಯ ಡೆಲಿಮಿಟೇಶನ್ ಕಾಯ್ದೆಯನ್ನು ರದ್ದುಪಡಿಸಿ, ಹೊಸ ಆಯೋಗವನ್ನು ರಚಿಸಲಾಗುವುದು. 

  3. ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ 2026: ದೆಹಲಿ, ಜಮ್ಮು ಮತ್ತು ಕಾಶ್ಮೀರ, ಪುದುಚೇರಿಯಂತಹ ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗ ಸಭೆಗಳಲ್ಲೂ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ದಾರಿ ಮಾಡಿಕೊಡುತ್ತದೆ.

ವಿರೋಧ ಪಕ್ಷಗಳ ಏಕೆ ಆಕ್ಷೇಪ?

ಮಹಿಳಾ ಮೀಸಲಾತಿಯ ಆಶಯಕ್ಕೆ ಎಲ್ಲರೂ ಸಮ್ಮತಿಸಿದ್ದರೂ, ಅದನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಕಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಮಸೂದೆಯನ್ನು ವಿರೋಧಿಸಿದರು. ಸದನದಲ್ಲಿ ಕೋಲಾಹಲವಾಯಿತು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, “ನಾವೆಲ್ಲರೂ ಮಹಿಳಾ ಮೀಸಲಾತಿಯ ಪರವಾಗಿದ್ದೇವೆ. ಆದರೆ ಸರ್ಕಾರ ಇದನ್ನು ತರುತ್ತಿರುವ ವಿಧಾನ ರಾಜಕೀಯ ಪ್ರೇರಿತವಾಗಿದೆ. ಕ್ಷೇತ್ರ ಪುನರ್ವಿಂಗಡಣೆಯ ಹೆಸರಿನಲ್ಲಿ ತಂತ್ರಗಳನ್ನು ಆಡುತ್ತಿದೆ” ಎಂದು ಆರೋಪಿಸಿದರು. 2023ರಲ್ಲೇ ಸಂವಿಧಾನದ 334(A) ವಿಧಿಯನ್ನು ಸೇರಿಸಿ ಒಮ್ಮತ ಮೂಡಿಸಲಾಗಿತ್ತು. ಈಗಿನ ಲೋಕಸಭಾ ಚುನಾವಣೆಯಿಂದಲೇ ಇದನ್ನು ಜಾರಿಗೆ ತರಲು ಏನು ಅಡ್ಡಿ?” ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

ಮಸೂದೆಗಳ ಪ್ರಮುಖ ತಿದ್ದುಪಡಿಗಳು

ಸಂಸತ್ತಿನ ಅಧಿವೇಶನದಲ್ಲಿ ಈ ವಿಷಯದ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳು ನಿರ್ಧರಿಸಿವೆ. ‘ಮೋದಿ ಸರ್ಕಾರವು ವಿರೋಧ ಪಕ್ಷಗಳನ್ನು ನಿಗ್ರಹಿಸಲು ಮತ್ತು ಚುನಾವಣಾ ಲಾಭ ಪಡೆಯಲು ಈ ರೀತಿ ವರ್ತಿಸುತ್ತಿದೆ’ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

Exit mobile version