ಕಾಲ್ಪುರ: ಬಲವಂತವಾಗಿ ಮುತ್ತು ಕೊಡಲು ಯತ್ನಿಸಿದ ಮಾಜಿ ಪ್ರೇಮಿಯ ನಾಲಿಗೆಯನ್ನೇ ಮಹಿಳೆಯೊಬ್ಬಳು ಕಚ್ಚಿ ತುಂಡರಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬೆಳಕಿಗೆ ಬಂದಿದೆ.
ಘಟನೆಯ ಮುಖ್ಯ ಆರೋಪಿ ಎಂದು ಗುರುತಿಸಲಾಗಿರುವ 35 ವರ್ಷದ ಚಂಪಿ ವಿವಾಹಿತ ವ್ಯಕ್ತಿಯಾಗಿದ್ದಾನೆ. ಆದರೆ ಅವನು ಈ ಯುವತಿಯೊಂದಿಗೆ ಪ್ರೇಮ ಸಂಬಂಧವನ್ನು ಹೊಂದಿದ್ದನು ಎನ್ನಲಾಗಿದೆ. ಆಕೆಯು ಕುಟುಂಬದ ಒಪ್ಪಿಗೆಯಿಂದ ಮತ್ತೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ನಂತರ, ಆಕೆ ಚಂಪಿಯೊಂದಿಗಿನ ಎಲ್ಲ ಸಂಪರ್ಕ ಕಡಿದುಕೊಂಡಿದ್ದಳು. ಆದರೆ ಚಂಪಿ ಇದನ್ನು ಒಪ್ಪಲಿಲ್ಲ. ಆಕೆಯ ಇಚ್ಛೆಗೆ ವಿರುದ್ಧವಾಗಿ ಪದೇ ಪದೇ ಭೇಟಿಗೆ ಒತ್ತಾಯ ಮಾಡುತ್ತಿದ್ದನು. ಫೋನ್‌ನಲ್ಲಿ ಕಿರುಕುಳ, ಮನೆ ಬಳಿ ಬಂದು ತೊಂದರೆ ನೀಡುತ್ತಿದ್ದನು.
ಚಂಪಿ ಮತ್ತೊಮ್ಮೆ ಆಕೆಯ ಮನೆಗೆ ಬಂದಿದ್ದು, ಬಲವಂತವಾಗಿ ಎಳೆದೊಯ್ದು ಮುತ್ತಿನ ಕೊಡಲು ಯತ್ನಿಸಿದ್ದಾನೆ. ಆದರೆ ಬಲವಂತವಾಗಿ ಆಕೆಗೆ ಮುತ್ತು ಕೊಡಲು ಯತ್ನಿಸಿದ ಚಂಪಿಯ ನಾಲಿಗೆಯನ್ನು ಹಲ್ಲುಗಳಿಂದ ಗಟ್ಟಿಯಾಗಿ ಕಚ್ಚಿದ್ದಾಳೆ. ಒಂದೇ ಕ್ಷಣದಲ್ಲಿ ನಾಲಿಗೆಯ ಮುಂಭಾಗದ ಒಂದು ದೊಡ್ಡ ಭಾಗ ತುಂಡಾಗಿ ಬಿದ್ದಿದೆ.
ನಂತರ ನೋವಿನಿಂದ ಕಿರುಚುತ್ತಾ ಆತ ಆಸ್ಪತ್ರೆಗೆ ಹೋಗಿದ್ದಾನೆ. ತುಂಡಾದ ನಾಲಿಗೆಯ ಭಾಗವನ್ನು ಆತ ತಾನೇ ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ತಲುಪಿದ್ದಾನೆ. ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ನಾಲಿಗೆಯನ್ನು ಮತ್ತೆ ಜೋಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಂಪೂರ್ಣ ಗುಣವಾಗುವುದು ಅನುಮಾನ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಬೆನ್ನಲ್ಲೇ ಮಹಿಳೆ ತಾನೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. “ಅವನು ನನ್ನ ಒಪ್ಪಿಗೆ ಇಲ್ಲದೆ ಬಲವಂತ ಮಾಡಿದ್ದಕ್ಕೆ ನಾನು ವಿರೋಧಿಸಿದೆ. ಇದು ಆತ್ಮರಕ್ಷಣೆ” ಎಂದು ಆಕೆ ಸ್ಪಷ್ಟವಾಗಿ ಹೇಳಿದ್ದಾಳೆ.
