ಉತ್ತರ ಪ್ರದೇಶ: ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಪತ್ನಿ ರೂಪಿಸಿದ್ದ ‘ಬ್ಲೂ ಡ್ರಮ್’ ಸ್ಕೆಚ್ ಕಂಡು ಪತಿಯೊಬ್ಬ ದಿಕ್ಕೆಟ್ಟಿದ್ದಾನೆ. ಕೊನೆಗೆ ತನ್ನ ಪ್ರಾಣ ಉಳಿಸಿಕೊಳ್ಳಲು ಆಕೆಯನ್ನು ಆಕೆಯ ಪ್ರೇಮಿಯ ಜೊತೆಗೇ ಕಳುಹಿಸಿಕೊಟ್ಟಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.
ರಾಜ್‌ಕುಮಾರ್ ಎಂಬುವವರ ಪತ್ನಿ ಕಳೆದ ಕೆಲವು ಸಮಯದಿಂದ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರವಾಗಿ ದಂಪತಿಗಳ ನಡುವೆ ಸದಾ ಜಗಳವಾಗುತ್ತಿತ್ತು. ಕಳೆದ ವರ್ಷ ಜುಲೈನಲ್ಲಿ ತನ್ನ ಆರು ತಿಂಗಳ ಮಗುವನ್ನೂ ಲೆಕ್ಕಿಸದೆ ಪತ್ನಿ ಪ್ರೇಮಿಯ ಜೊತೆ ಓಡಿಹೋಗಿದ್ದಳು. ಆದರೆ ಪತಿ ಪ್ರಶ್ನಿಸಿದಾಗಲೆಲ್ಲಾ ಸಾಕ್ಷಿ ಕೇಳಿ ಆತನನ್ನೇ ಬಾಯಿ ಮುಚ್ಚಿಸುತ್ತಿದ್ದಳು.
ಒಮ್ಮೆ ಪತ್ನಿ ತನ್ನ ಪ್ರೇಮಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ರಾಜ್‌ಕುಮಾರ್ ಆಕೆಯ ಮೊಬೈಲ್ ಕಿತ್ತುಕೊಂಡಿದ್ದಾರೆ. ಆಗ ಗ್ಯಾಲರಿಯಲ್ಲಿದ್ದ ಫೋಟೋಗಳು ರಾಜ್‌ಕುಮಾರ್ ಅವರ ಎದೆಯಲ್ಲಿ ನಡುಕ ಹುಟ್ಟಿಸಿವೆ. ಅಲ್ಲಿ ಕೇವಲ ಅಕ್ರಮ ಸಂಬಂಧದ ಫೋಟೋಗಳಿರಲಿಲ್ಲ, ಬದಲಾಗಿ ಪತಿಯನ್ನೇ ಕೊಲೆ ಮಾಡಲು ಸಿದ್ಧಪಡಿಸಿದ್ದ ಸಿಮೆಂಟ್ ಮತ್ತು ನೀಲಿ ಡ್ರಮ್‌ನ ಫೋಟೋಗಳಿದ್ದವು. ಫೇಸ್‌ಬುಕ್‌ನಲ್ಲಿ ಕೊಲೆಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಶೇರ್ ಮಾಡಿಕೊಂಡಿದ್ದ ಪತ್ನಿ, ಪತಿಯ ಫೋಟೋ ಮೇಲೆ ನೀಲಿ ಡ್ರಮ್ ಮತ್ತು ಸಿಮೆಂಟ್ ಎಂದು ಬರೆದುಕೊಂಡಿದ್ದಳು.
ಇದು 2025ರ ಮಾರ್ಚ್‌ನಲ್ಲಿ ಮೀರತ್‌ನಲ್ಲಿ ನಡೆದ ಸೌರಭ್ ರಜಪೂತ್ ಎಂಬುವವರ ಭೀಕರ ಹತ್ಯೆಯ ಮಾದರಿಯಾಗಿತ್ತು. ಅಲ್ಲಿ ಸೌರಭ್ ಪತ್ನಿ ಮತ್ತು ಆಕೆಯ ಪ್ರೇಮಿ ಸೇರಿ ಸೌರಭ್ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ನೀಲಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಿದ್ದರು. ಇದೇ ಮಾದರಿಯಲ್ಲಿ ರಾಜ್‌ಕುಮಾರ್‌ನನ್ನು ಕೊಲೆ ಮಾಡಲು ಆತನ ಪತ್ನಿ ಸ್ಕೆಚ್ ಹಾಕಿದ್ದಳು ಎಂಬುದು ಮೊಬೈಲ್‌ನಲ್ಲಿದ್ದ ಸಾಕ್ಷ್ಯಗಳಿಂದ ಖಚಿತವಾಯಿತು.
ಪತ್ನಿ ತನ್ನನ್ನು ಮಾತ್ರವಲ್ಲದೆ ತನ್ನ ಮೂವರು ಸಹೋದರರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದಾಗಲೂ ಪತ್ನಿ ತನ್ನ ಪ್ರೇಮಿಯ ಜೊತೆಗೇ ಇರುತ್ತೇನೆ ಎಂದು ಹಠ ಹಿಡಿದಿದ್ದಾಳೆ. ಆಗ ರಾಜ್‌ಕುಮಾರ್ ಆಕೆಯ ಕ್ರೌರ್ಯಕ್ಕೆ ಬಲಿಯಾಗುವ ಬದಲು, ತನ್ನ ಜೀವ ಉಳಿಸಿಕೊಳ್ಳುವ ಸಲುವಾಗಿ ಆಕೆಯನ್ನು ಆಕೆಯ ಪ್ರೇಮಿಯ ಜೊತೆಗೇ ಕಳುಹಿಸಿಕೊಡಲು ಒಪ್ಪಿಕೊಂಡಿದ್ದಾರೆ. ಈ ಘಟನೆ ಈಗ ಇಡೀ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
