ಸೀರೆ ಕೊಡಿಸಲಿಲ್ಲವೆಂದು ಪತಿಯನ್ನೇ ಕೊಂದ ಪತ್ನಿ: ಕುಕ್ಕರ್ ಮುಚ್ಚಳದಿಂದ ಹೊಡೆದು ಉಸಿರುಗಟ್ಟಿಸಿ ಹತ್ಯೆ

Untitled design 2026 07 22T160146.813

ಮುಂಬೈ: ಸಣ್ಣ ವಿಷಯಗಳು ದೊಡ್ಡ ದುರಂತಗಳಿಗೆ ಕಾರಣವಾಗಬಹುದು ಎನ್ನುವುದಕ್ಕೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ ಪೂರ್ವದಲ್ಲಿ ನಡೆದ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಸೀರೆ ಕೊಡಿಸದ ವಿಚಾರವಾಗಿ ಆರಂಭವಾದ ದಂಪತಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಪತಿಯನ್ನೇ ಕುಕ್ಕರ್ ಮುಚ್ಚಳದಿಂದ ಹಲ್ಲೆ ನಡೆಸಿ ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿದ ಆರೋಪದ ಮೇಲೆ 30 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮೃತ ವ್ಯಕ್ತಿಯನ್ನು ಹರೇರಾಮ್ ಕಿಶುಂಜಿ ಸಿಂಗ್ (35) ಎಂದು ಗುರುತಿಸಲಾಗಿದ್ದು, ಆರೋಪಿಯಾಗಿರುವ ಪತ್ನಿ ಸುನಿತಾದೇವಿ ಹರೇರಾಮ್ ಸಿಂಗ್ (30) ಮೂಲತಃ ಬಿಹಾರದ ರೋಹ್ರಾಸ್ ಜಿಲ್ಲೆಯ ನಿವಾಸಿಗಳು. ಉದ್ಯೋಗ ನಿಮಿತ್ತ ಇಬ್ಬರೂ ಮಹಾರಾಷ್ಟ್ರದ ಬದ್ಲಾಪುರ ಪೂರ್ವದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಜುಲೈ 19ರಂದು ಕೆಲಸ ಮುಗಿಸಿ ಮನೆಗೆ ಬಂದ ಹರೇರಾಮ್ ಅವರಿಗೆ ಪತ್ನಿ ಸೀರೆ ತಂದಿಲ್ಲ ಎಂದು ಪ್ರಶ್ನಿಸಿದ್ದಾಳೆ. ಇದೇ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ತೀವ್ರ ವಾಗ್ವಾದಕ್ಕೆ ತಿರುಗಿದೆ. ಆಕ್ರೋಶಗೊಂಡ ಸುನಿತಾದೇವಿ ಮನೆಯಲ್ಲಿದ್ದ ಪ್ರೆಷರ್ ಕುಕ್ಕರ್‌ನ ಮುಚ್ಚಳವನ್ನು ತೆಗೆದುಕೊಂಡು ಪತಿಯ ತಲೆಗೆ ಹಲವು ಬಾರಿ ಬಲವಾಗಿ ಹೊಡೆದಿದ್ದಾಳೆ ಎನ್ನಲಾಗಿದೆ.

ತೀವ್ರವಾಗಿ ಗಾಯಗೊಂಡ ಪತಿ ನೆಲಕ್ಕುರುಳಿದ ಬಳಿಕವೂ ಆತನ ಕುತ್ತಿಗೆಯನ್ನು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಘಟನೆ ನಡೆದ ನಂತರ ಆರೋಪಿಯು ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದಳು. ಪತಿ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿ ಇದನ್ನು ಅಪಘಾತದ ರೂಪಕ್ಕೆ ತರುವ ಪ್ರಯತ್ನ ಮಾಡಿದ್ದಾಳೆ. ಈ ಮಾಹಿತಿ ಆಧರಿಸಿ ಆರಂಭದಲ್ಲಿ ಪೊಲೀಸರು ಅಪಘಾತಕಾರಿ ಸಾವು (ADR) ಪ್ರಕರಣ ದಾಖಲಿಸಿಕೊಂಡಿದ್ದರು.

ಆದರೆ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಈ ಪ್ರಕರಣ ದಿಕ್ಕೇ ಬದಲಾಯಿತು. ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿದ ವರದಿಯಲ್ಲಿ ಹರೇರಾಮ್ ಅವರ ಸಾವಿಗೆ ಕುತ್ತಿಗೆ ಹಿಸುಕಿದ್ದರಿಂದ ಉಸಿರುಗಟ್ಟುವಿಕೆ ಕಾರಣವಾಗಿದೆ ಎಂದು ಸ್ಪಷ್ಟಪಡಿಸಲಾಗಿತ್ತು. ಜೊತೆಗೆ ತಲೆಯ ಮೇಲೂ ಗಂಭೀರ ಗಾಯಗಳಿರುವುದು ವರದಿಯಲ್ಲಿ ಉಲ್ಲೇಖವಾಗಿತ್ತು. ಇದರಿಂದ ಪ್ರಕರಣದ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತು.

ಬದ್ಲಾಪುರ ಈಸ್ಟ್ ಪೊಲೀಸ್ ಠಾಣೆಯ ಹಿರಿಯ ಇನ್ಸೆಕ್ಟರ್ ನಿತಿನ್ ಪಾಟೀಲ್ ನೇತೃತ್ವದ ತನಿಖಾ ತಂಡ ಮೃತನ ಕುಟುಂಬಸ್ಥರು, ನೆರೆಹೊರೆಯವರು ಹಾಗೂ ಬಾಡಿಗೆ ಮನೆಯ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿತು. ತನಿಖೆಯಲ್ಲಿ ಹಲವು ಮಾಹಿತಿ ಬೆಳಕಿಗೆ ಬಂದ ಹಿನ್ನೆಲೆ ಸುನಿತಾದೇವಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆ ವೇಳೆ ಆಕೆಯ ಹೇಳಿಕೆಗಳಲ್ಲಿ ಕಂಡುಬಂದ ವ್ಯತ್ಯಾಸಗಳು ಮತ್ತು ವೈದ್ಯಕೀಯ ಸಾಕ್ಷ್ಯಾಧಾರಗಳು ಪ್ರಕರಣವನ್ನು ಕೊಲೆ ಎಂದು ದೃಢಪಡಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಾದ ಬಳಿಕ ಸುನಿತಾದೇವಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಹೆಚ್ಚಿನ ತನಿಖೆಗಾಗಿ ನ್ಯಾಯಾಲಯ ಆರೋಪಿಯನ್ನು ಜುಲೈ 29ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.

Exit mobile version