ಇಂದು ‘ಸಂವಿಧಾನ ದಿನ’: ನವೆಂಬರ್ 26 ರಂದೇ ಆಚರಿಸುವುದೇಕೆ?

Untitled design 2025 11 26T102945.258

ಇಂದು ನವೆಂಬರ್ 26 ಭಾರತದ ಸಂವಿಧಾನ ದಿನ. ಪ್ರತಿ ವರ್ಷ ಈ ದಿನವನ್ನು ದೇಶದಾದ್ಯಂತ ‘ಸಂವಿಧಾನ ದಿನ’ (Constitution Day ಅಥವಾ ಸಂವಿಧಾನ ದಿವಸ್) ಎಂದು ಆಚರಿಸಲಾಗುತ್ತದೆ. ಆದರೆ ಈ ದಿನ ಯಾಕೆ ವಿಶೇಷ? ಇದರ ಹಿಂದಿನ ಇತಿಹಾಸ ಏನು? ಎಂಬುದನ್ನು ತಿಳಿಯಿರಿ.

1949ರ ನವೆಂಬರ್ 26ರಂದು ಭಾರತದ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಔಪಚಾರಿಕವಾಗಿ ಅಂಗೀಕರಿಸಿತ್ತು. ಆ ದಿನವೇ ಸಂವಿಧಾನ ರಚನಾ ಕೆಲಸ ಪೂರ್ಣಗೊಂಡಿತ್ತು. ಆದರೆ ಸಂವಿಧಾನ ಜಾರಿಗೆ ಬಂದಿದ್ದು 1950ರ ಜನವರಿ 26ರಂದು, ಆದ್ದರಿಂದಲೇ ಗಣರಾಜ್ಯೋತ್ಸವ. ಅಂಗೀಕಾರದ ದಿನವಾದ ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸಲು 2015ರಲ್ಲಿ ಭಾರತ ಸರ್ಕಾರ ನಿರ್ಧರಿಸಿತ್ತು. ಆ ವರ್ಷವೇ ಸಂವಿಧಾನದ ಮಹಾನ್ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜಯಂತಿ ಆಚರಣೆ ನಡೆಯುತ್ತಿತ್ತು. ಅವತ್ತೇ ಮೊದಲ ಬಾರಿಗೆ ಅಧಿಕೃತವಾಗಿ ಸಂವಿಧಾನ ದಿನ ಆಚರಿಸಲಾಯಿತು.

ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶ ಏನೆಂದರೆ, ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಗೌರವ, ಜಾಗೃತಿ ಮತ್ತು ಅರಿವು ಮೂಡಿಸುವುದು. ಸಂವಿಧಾನ ಎಂದರೆ ಕೇವಲ ಕಾನೂನು ಪುಸ್ತಕವಲ್ಲ, ಅದು ಭಾರತೀಯರ ಜೀವನದ ಆಧಾರಸ್ತಂಭ, ಸಮಾನತೆಯ ದಿಕ್ಸೂಚಿ, ನ್ಯಾಯದ ರಕ್ಷಾಕವಚ.

ಭಾರತೀಯ ಸಂವಿಧಾನ ರಚನೆ ಒಂದು ಮಹಾ ಸಾಹಸವಾಗಿತ್ತು. ಸ್ವತಂತ್ರ ಭಾರತಕ್ಕೆ ಸಂವಿಧಾನ ರಚಿಸಲು 1946ರ ಡಿಸೆಂಬರ್ 9ರಂದು ಸಂವಿಧಾನ ಸಭೆ ಮೊದಲ ಸಭೆ ನಡೆಸಿತ್ತು. ಒಟ್ಟು 2 ವರ್ಷ 11 ತಿಂಗಳು 18 ದಿನಗಳ ಕಾಲ  ಅಂದರೆ 1946ರಿಂದ 1949ರವರೆಗೆ 11 ಸಮಿತಿಗಳು, 166 ದಿನಗಳ ಸಭೆಗಳು, ಸಾವಿರಾರು ಗಂಟೆಗಳ ಚರ್ಚೆಗಳ ನಂತರ ಸಂವಿಧಾನ ಸಿದ್ಧವಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಮುನ್ನಡೆಸಿದ್ದರು.

ಭಾರತದಂತಹ ವೈವಿಧ್ಯತೆ ತುಂಬಿದ ದೇಶದಲ್ಲಿ ಎಲ್ಲರನ್ನೂ ಒಟ್ಟುಗೂಡಿಸುವ ಸಂವಿಧಾನ ರಚಿಸುವುದು ಸುಲಭವಲ್ಲ. ಬೇರೆ ಬೇರೆ ಧರ್ಮ, ಭಾಷೆ, ಜಾತಿ, ಸಂಸ್ಕೃತಿ, ಆರ್ಥಿಕ ಸ್ಥಿತಿ ಹೊಂದಿದ ಜನರನ್ನು ಒಂದೇ ರಾಷ್ಟ್ರೀಯ ಗುರುತಿನಡಿ ತರುವುದು ಸವಾಲಾಗಿತ್ತು. ಆದರೆ ಸಂವಿಧಾನ ಎಲ್ಲರಿಗೂ ಸಮಾನ ನ್ಯಾಯ, ಸ್ವಾತಂತ್ರ್ಯ, ಸಮಾನತೆಯ ಭರವಸೆ ನೀಡಿತ್ತು. ಮೂಲಭೂತ ಹಕ್ಕುಗಳು, ನೀತಿ ನಿರ್ದೇಶಕ ತತ್ವಗಳು, ಮೂಲ ಕರ್ತವ್ಯಗಳು ಇವೆಲ್ಲವೂ ಸಾಮಾನ್ಯ ಜನರ ಜೀವನ ಮಟ್ಟ ಏರಿಸುವ ಗುರಿಯನ್ನು ಹೊಂದಿವೆ.

ವಿಶ್ವದ ಹಲವು ದೇಶಗಳ ಸಂವಿಧಾನಗಳಿಂದ ಸ್ಫೂರ್ತಿ ಪಡೆಯಲಾಯಿತು.

ಇದೆಲ್ಲವನ್ನೂ ಭಾರತೀಯ ಸಂದರ್ಭಕ್ಕೆ ತಕ್ಕಂತೆ ರೂಪಿಸಲಾಯಿತು. ಇಂದು ಸಂವಿಧಾನ ದಿನಾಚರಣೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಉಪನ್ಯಾಸ, ಓದುವ ಸ್ಪರ್ಧೆ, ಚರ್ಚೆ ನಡೆಯುತ್ತಿದೆ. ಸಂವಿಧಾನದ ಮುನ್ನುಡಿಯನ್ನು ಜನರು ಓದಿ, ಅದರ ಮೌಲ್ಯಗಳನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುತ್ತಾರೆ.

ನವೆಂಬರ್ 26 ಕೇವಲ ಒಂದು ದಿನವಲ್ಲ, ಅದು ಭಾರತೀಯ ಜನರ ಸ್ವಾತಂತ್ರ್ಯ, ಸಮಾನತೆ, ನ್ಯಾಯದ ಹೋರಾಟದ ಸ್ಮರಣೆ. ಈ ದಿನ ನಾವು ಸಂವಿಧಾನಕ್ಕೆ ಗೌರವ ಸಲ್ಲಿಸೋಣ, ಅದರ ಆಶಯಗಳನ್ನು ಜೀವಂತವಾಗಿಡೋಣ.

Exit mobile version