ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ಅಕ್ರಮಗಳ ಆರೋಪಗಳ ಬೆನ್ನಲ್ಲೇ ಚುನಾವಣಾ ಆಯೋಗ ಮಹತ್ವದ ನಿರ್ಧಾರ ಕೈಗೊಂಡಿದ್ದು, ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬರುವ 15 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲು ಆದೇಶಿಸಿದೆ. ಡೈಮಂಡ್ ಹಾರ್ಬರ್ ಮತ್ತು ಮಗ್ರಹತ್ ಪಶ್ಚಿಮ್ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಈ ಮತಗಟ್ಟೆಗಳಲ್ಲಿ ಶನಿವಾರ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.
ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಮಗ್ರಹತ್ ಪಶ್ಚಿಮ್ ಕ್ಷೇತ್ರದ 11 ಮತಗಟ್ಟೆಗಳು ಹಾಗೂ ಡೈಮಂಡ್ ಹಾರ್ಬರ್ ಕ್ಷೇತ್ರದ ನಾಲ್ಕು ಮತಗಟ್ಟೆಗಳು ಮರು ಮತದಾನಕ್ಕೆ ಒಳಪಟ್ಟಿವೆ.
ಇವಿಎಂ ಟ್ಯಾಂಪರಿಂಗ್, ಬೂತ್ ಜಾಮಿಂಗ್ ಮತ್ತು ರಿಗ್ಗಿಂಗ್ ಆರೋಪಗಳು ಈ ನಿರ್ಧಾರಕ್ಕೆ ಕಾರಣವಾಗಿದೆ. ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಫಾಲ್ಟಾ ಪ್ರದೇಶದಲ್ಲಿ ಇವಿಎಂ ಯಂತ್ರಗಳ ಗುಂಡಿಗಳನ್ನು ಟೇಪ್ ಬಳಸಿ ತಿರುಚಲಾಗಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಹೊರ ಹಾಕಿತ್ತು. ಈ ಆರೋಪಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದವು.
ಇದಕ್ಕೂ ಹೊರತಾಗಿ, ಕೆಲವು ಮತಗಟ್ಟೆಗಳಲ್ಲಿ ಮತದಾರರನ್ನು ಬೆದರಿಸುವುದು, ಮತದಾನ ಪ್ರಕ್ರಿಯೆಗೆ ಅಡ್ಡಿಪಡಿಸುವುದು ಹಾಗೂ ಬಲವಂತವಾಗಿ ಮತ ಚಲಾಯಿಸುವಂತಹ ಘಟನೆಗಳೂ ನಡೆದಿವೆ ಎಂಬ ದೂರುಗಳು ಚುನಾವಣಾ ಆಯೋಗಕ್ಕೆ ತಲುಪಿದ್ದವು. ಮತದಾರರು ಹಾಗೂ ವಿವಿಧ ರಾಜಕೀಯ ಪಕ್ಷಗಳು ಸಲ್ಲಿಸಿದ ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, ಪರಿಶೀಲನೆಯ ನಂತರ ಮರು ಮತದಾನಕ್ಕೆ ಆದೇಶಿಸಿದೆ.
ಮೂಲಗಳ ಪ್ರಕಾರ, ಫಾಲ್ಟಾ ಕ್ಷೇತ್ರದ ಇನ್ನೂ 30 ಮತಗಟ್ಟೆಗಳಲ್ಲಿ ಇದೇ ರೀತಿಯ ಅಕ್ರಮಗಳು ನಡೆದಿರುವ ಸಾಧ್ಯತೆ ಇದೆ. ಈ ಹಿನ್ನೆಲೆ ಆ ಮತಗಟ್ಟೆಗಳಲ್ಲಿ ಕೂಡ ಮರು ಮತದಾನ ನಡೆಯುವ ಸಾಧ್ಯತೆ ಇದ್ದು, ಈ ಬಗ್ಗೆ ಅಂತಿಮ ನಿರ್ಧಾರವನ್ನು ಚುನಾವಣಾ ಆಯೋಗ ಶೀಘ್ರದಲ್ಲೇ ಕೈಗೊಳ್ಳುವ ನಿರೀಕ್ಷೆಯಿದೆ.
ಪ್ರಿಲ್ 29ರಂದು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನ ನಡೆಯಿತು.
