ಕೋಲ್ಕತ್ತಾ (ಜುಲೈ 10): ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬೆಳವಣಿಗೆಗಳ ನಡುವೆಯೇ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITC) ಬಣಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಪಶ್ಚಿಮ ಬಂಗಾಳ ಪೊಲೀಸರು ಇಂದು ಶುಕ್ರವಾರ ಮಮತಾ ಬ್ಯಾನರ್ಜಿ ಬಣಕ್ಕೆ ಸೇರಿದ ಟಿಎಂಸಿಯ 12 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದು, ಪಕ್ಷದ ಆರ್ಥಿಕ ವ್ಯವಹಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಲ್ಕತ್ತಾ ಹೈಕೋರ್ಟ್ ಗುರುವಾರ ಟಿಎಂಸಿಯ ಮೊದಲು ಫ್ರೀಜ್ ಮಾಡಲಾಗಿದ್ದ ಮೂರು ಬ್ಯಾಂಕ್ ಖಾತೆಗಳಿಂದ ದೈನಂದಿನ ಆಡಳಿತ ವೆಚ್ಚ ಮತ್ತು ಕಾನೂನು ವೆಚ್ಚಗಳಿಗೆ ಹಣ ಬಳಸಲು ಅನುಮತಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಹೈಕೋರ್ಟ್‌ನ ಈ ಮಧ್ಯಂತರ ಅನುಮತಿಯ ಒಂದೇ ದಿನದೊಳಗೆ ಪೊಲೀಸರು ಮತ್ತೆ 12 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮೂಲಗಳ ಪ್ರಕಾರ, ಮಮತಾ ಬ್ಯಾನರ್ಜಿ ಬಣಕ್ಕೆ ಸೇರಿದ ಒಟ್ಟು 12 ಖಾತೆಗಳನ್ನು ವಿವಿಧ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಸ್ಥಗಿತಗೊಳಿಸಲು ಪಶ್ಚಿಮ ಬಂಗಾಳ ಪೊಲೀಸರು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ 12 ಖಾತೆಗಳ ಜೊತೆಗೆ ಈಗಾಗಲೇ ಸ್ಥಗಿತಗೊಂಡಿದ್ದ ಮೂರು ಖಾತೆಗಳನ್ನು ಸೇರಿಸಿ ಒಟ್ಟು 15 ಖಾತೆಗಳಲ್ಲಿ ಸುಮಾರು 1,000 ಕೋಟಿ ರೂ. ಮೊತ್ತ ಇರುವುದಾಗಿ ಹೇಳಲಾಗಿದೆ ಎಂದು ತಿಳಿದು ಬಂದಿದೆ.
ಈ ಕ್ರಮಕ್ಕೆ ಪ್ರಮುಖ ಕಾರಣ, ಟಿಎಂಸಿಯೊಳಗಿನ ಭಿನ್ನಮತೀಯ ಶಾಸಕರಿಂದ ಹಣ ದುರುಪಯೋಗದ ಆರೋಪಗಳು ಕೇಳಿಬಂದಿರುವುದು. ಈ ಆರೋಪ ಸಂಬಂಧ ಪೊಲೀಸರು ಗಂಭೀರ ತನಿಖೆ ಆರಂಭಿಸಿದ್ದು, ಋತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸೇರಿದಂತೆ ಏಳು ಬಂಡಾಯ ಶಾಸಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಟಿಎಂಸಿಯ ಬಂಡಾಯ ಬಣದ ಶಾಸಕ ವಿಶ್ವನಾಥ್ ದಾಸ್, ಹಣದ ದುರುಪಯೋಗ ನಡೆದಿದೆ ಎಂದು ಬಿಧಾನ್ ನಗರ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣಕ್ಕೆ ವೇಗ ಸಿಕ್ಕಿದೆ ಎನ್ನಲಾಗಿದೆ.
ಇದಕ್ಕೂ ಮೊದಲು ಜೂನ್ 19ರಂದು ಮೂರು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ಟಿಎಂಸಿ ಹೈಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಕಲ್ಕತ್ತಾ ಹೈಕೋರ್ಟ್, ಮುಟ್ಟುಗೋಲು ಹಾಕಲಾಗಿದ್ದ ಆ ಮೂರು ಖಾತೆಗಳನ್ನು ಕೇವಲ ದೈನಂದಿನ ಆಡಳಿತ ಹಾಗೂ ಕಾನೂನು ವೆಚ್ಚಗಳಿಗೆ ಮಾತ್ರ ಬಳಸಲು ಅನುಮತಿ ನೀಡಿತ್ತು. ಆದರೆ, ಇದೀಗ ಮತ್ತೊಮ್ಮೆ 12 ಖಾತೆಗಳನ್ನು ಫ್ರೀಜ್ ಮಾಡಿರುವುದು ಟಿಎಂಸಿಗೆ ಆರ್ಥಿಕ ಮತ್ತು ರಾಜಕೀಯವಾಗಿ ಹೊಸ ಸವಾಲು ತಂದಿದೆ.
ಈ ಬೆಳವಣಿಗೆ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಒಳಜಗಳ ಮತ್ತಷ್ಟು ತೀವ್ರವಾಗುತ್ತಿರುವ ಸೂಚನೆ ನೀಡಿದ್ದು, ಮುಂದಿನ ದಿನಗಳಲ್ಲಿ ತನಿಖೆ ಯಾವ ದಿಕ್ಕಿಗೆ ಸಾಗಲಿದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
