ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುತ್ತೇನೆ: ಶೇಖ್ ಹಸೀನಾ

Untitled design (26)

ನವದೆಹಲಿ (ಜುಲೈ 10): ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ, ಮುಂಬರುವ ಡಿಸೆಂಬರ್‌ನಲ್ಲಿ ತಾಯ್ನಾಡಿಗೆ ಮರಳಿ ನ್ಯಾಯಾಲಯದ ಮುಂದೆ ಸ್ವಯಂಪ್ರೇರಿತವಾಗಿ ಶರಣಾಗುವುದಾಗಿ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ. ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿಯಿಂದ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಹಸೀನಾ, “ನಾನು ಬಾಂಗ್ಲಾದೇಶಕ್ಕೆ ಮರಳಿದ ತಕ್ಷಣ ಅವರು ನನ್ನನ್ನು ಬಂಧಿಸಬಹುದು, ಇಲ್ಲವೇ ಕೊಲ್ಲಬಹುದು. ಆದರೂ ನಾನು ಹೋಗಲೇಬೇಕು” ಎಂದು ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

78 ವರ್ಷದ ಶೇಖ್ ಹಸೀನಾ, ತಮ್ಮ ಮರಳುವ ನಿರ್ಧಾರವನ್ನು ಕೇವಲ ವೈಯಕ್ತಿಕ ಹೋರಾಟವಲ್ಲ, ರಾಜಕೀಯ ಮತ್ತು ನೈತಿಕ ಹೊಣೆಗಾರಿಕೆ ಎಂದು ವಿವರಿಸಿದ್ದಾರೆ. ತಮ್ಮ ‘ಅವಾಮಿ ಲೀಗ್’ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತಾಯ್ನಾಡಿನಲ್ಲಿ ದೌರ್ಜನ್ಯ ಎದುರಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, “ಅವರ ಪರವಾಗಿ ನಿಲ್ಲಲು ನಾನು ಸ್ವತಃ ಹಾಜರಾಗುತ್ತೇನೆ. ಸಾವು ಬರುವುದಾದರೆ ಅದು ನನ್ನ ಸ್ವಂತ ಮಣ್ಣಿನಲ್ಲೇ ಬರಲಿ” ಎಂದು ಭಾವುಕರಾಗಿ ಹೇಳಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳು ರಾಜಕೀಯ ಪ್ರೇರಿತವಾಗಿವೆ ಎಂದು ಹಸೀನಾ ಪುನರುಚ್ಚರಿಸಿದ್ದಾರೆ. “ನ್ಯಾಯಾಲಯದ ಪ್ರಕ್ರಿಯೆ ಆರಂಭವಾದರೆ, ಪ್ರಸ್ತುತ ಬಾಂಗ್ಲಾದೇಶದಲ್ಲಿ ನ್ಯಾಯಾಂಗ ಎಷ್ಟು ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದೆ ಎಂಬುದು ಜಗತ್ತಿಗೆ ಗೊತ್ತಾಗುತ್ತದೆ. ಅದನ್ನು ಸಾಬೀತುಪಡಿಸಲು ನಾನು ಸ್ವಯಂಪ್ರೇರಿತರಾಗಿ ನ್ಯಾಯಾಲಯಕ್ಕೆ ಹೋಗುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಸರ್ಕಾರದ ಒಳ್ಳೆಯದು-ಕೆಟ್ಟದ್ದನ್ನು ಅಂತಿಮವಾಗಿ ನಿರ್ಧರಿಸುವ ಹಕ್ಕು ಜನರಿಗೇ ಸೇರಿದ್ದು, ತಮ್ಮ ಆಡಳಿತದ ತೀರ್ಪನ್ನು ಬಾಂಗ್ಲಾದೇಶದ ಜನರಿಗೇ ಬಿಡುತ್ತೇನೆ ಎಂದು ತಿಳಿಸಿದ್ದಾರೆ. 

2024ರಲ್ಲಿ ನಡೆದ ವಿದ್ಯಾರ್ಥಿ ದಂಗೆಯ ಬಳಿಕ ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದರು. ಆಂದೋಲನದ ನಂತರ ಬಾಂಗ್ಲಾದೇಶದ ರಾಜಕೀಯ ಚಿತ್ರಣವೇ ಬದಲಾಗಿದ್ದು, ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ನಂತರ ವಿಶೇಷ ನ್ಯಾಯಮಂಡಳಿ ಹಸೀನಾ ಅವರಿಗೆ ಗೈರುಹಾಜರಿಯಲ್ಲಿ ಮರಣದಂಡನೆ ವಿಧಿಸಿತ್ತು. ಈ ತೀರ್ಪನ್ನು ಅವರು “ಕಾನೂನುಬಾಹಿರ, ಸಂವಿಧಾನ ವಿರೋಧಿ ಮತ್ತು ರಾಜಕೀಯ ಪ್ರತೀಕಾರ” ಎಂದು ತಳ್ಳಿಹಾಕಿದ್ದಾರೆ.

ಬಾಂಗ್ಲಾದೇಶದ ಪ್ರಸ್ತುತ ಆಡಳಿತವು ಹಸೀನಾ ಅವರನ್ನು ಹಸ್ತಾಂತರಿಸುವಂತೆ ಭಾರತ ಸರ್ಕಾರಕ್ಕೆ ಪದೇಪದೇ ಮನವಿ ಮಾಡುತ್ತಿದೆ. ಆದರೆ ಹಸೀನಾ, “ನನ್ನನ್ನು ಯಾರೂ ಕಳುಹಿಸಬೇಕಾಗಿಲ್ಲ. ನಾನೇ ಸ್ವತಃ ಅಲ್ಲಿಗೆ ಹೋಗುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ. ಡಿಸೆಂಬರ್‌ನಲ್ಲಿ ಅವರ ಮರಳುವಿಕೆ ಬಾಂಗ್ಲಾದೇಶದ ರಾಜಕೀಯದಲ್ಲಿ ಹೊಸ ತಿರುವು ತರಬಹುದಾದ ಬೆಳವಣಿಗೆಯಾಗಿ ಕಾಣಲಾಗುತ್ತಿದೆ. ಒಂದು ಕಡೆ ಅದು ಕಾನೂನು-ರಾಜಕೀಯ ಸಂಘರ್ಷವನ್ನು ತೀವ್ರಗೊಳಿಸಬಹುದಾದರೆ, ಮತ್ತೊಂದೆಡೆ ಅವಾಮಿ ಲೀಗ್ ಪಕ್ಷದ ಪುನರ್‌ಸಂಘಟನೆಗೆ ವೇದಿಕೆಯೂ ಆಗಬಹುದು.

Exit mobile version