ಕೊಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಒಂದು ಮಹತ್ವಪೂರ್ಣ ದಿನ. ಭಾರತೀಯ ಜನತಾ ಪಾರ್ಟಿ ಬಿಜೆಪಿಯ ನಾಯಕ ಸುವೇಂದು ಅಧಿಕಾರಿ ಅವರು ಬ್ರಿಗೇಡ್ ಪ್ಯಾರೇಡ್ ಗ್ರೌಂಡ್‌ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಿಎಂ ಜೊತೆಯಲ್ಲೇ 5 ಸಚಿವರ ಪ್ರಮಾಣ ವಚನ ಸಾಧ್ಯತೆ ಇದ್ದು, ದಿಲೀಪ್ ಘೋಷ್, ಅಶೋಕ್ ಕೀರ್ತನಿಯಾ ಸೇರಿದಂತೆ 5 ಸಚಿವರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶಂಕರ್ ಘೋಷ್ ಕೂಡಾ ಇಂದು ಸಚಿವರಾಗಿ ಪ್ರಮಾಣ ವಚನ ತೆಗೆದುಕೊಳ್ಳಲಿದ್ದಾರೆ.
ಇದು ರಾಜ್ಯದಲ್ಲಿ 15 ವರ್ಷಗಳ ತೃಣಮೂಲ್ ಕಾಂಗ್ರೆಸ್ ಟಿಎಂಸಿ ಆಡಳಿತಕ್ಕೆ ಅಂತ್ಯ ಹಾಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಸೇರಿದಂತೆ ಹಲವು ಕೇಂದ್ರ ನಾಯಕರು ಕೊಲ್ಕತ್ತಾ ತಲುಪಿದ್ದು, ಪ್ರಧಾನಿ ಮೋದಿ ಅವರು ಬೆಳಗ್ಗೆ ಕೊಲ್ಕತ್ತಾ ವಿಮಾನ ನಿಲ್ದಾಣ ತಲುಪಿದರು.
ಸುಮಾರು 20ಕ್ಕೂ ಹೆಚ್ಚು ಬಿಜೆಪಿ ಶಾಸನಸಭೆಯ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಮತ್ತು ಇತರೆ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಕೊಲ್ಕತ್ತಾ ವಿಮಾನ ನಿಲ್ದಾಣವು ಈ ಬೆಳಗ್ಗೆಹೆಚ್ಚು ಜನಜಂಗುಳಿಯಿಂದ ತುಂಬಿತ್ತು.
ವಿವಿಐಪಿ ವಿಮಾನಗಳಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಕೊಲ್ಕತ್ತಾದಲ್ಲಿದ್ದು, ಬಿಜೆಪಿ ಶಾಸಕರ ಸಭೆಯಲ್ಲಿ ಸುವೇಂದು ಅಧಿಕಾರಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ್ದರು. ಬಿಜೆಪಿ ಈ ಚುನಾವಣೆಯಲ್ಲಿ 294ಸ್ಥಾನಗಳ ಪೈಕಿ 207 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತ ಸಾಧಿಸಿದೆ. ಸುವೇಂದು ಅಧಿಕಾರಿ ಅವರು ಟಿಎಂಸಿ ನಾಯಕರಾಗಿದ್ದು, 2020ರಲ್ಲಿ ಬಿಜೆಪಿಗೆ ಸೇರಿದ್ದರು.
ಅವರು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗುತ್ತಿದ್ದಾರೆ. “ಪೊರಿಬರ್ತನ್ ಸರ್ಕಾರ” ಎಂದು ಅವರು ತಮ್ಮ ಸರ್ಕಾರವನ್ನು ಕರೆದಿದ್ದಾರೆ. ಇದು ಬಂಗಾಳದಲ್ಲಿ ಬದಲಾವಣೆಯ ಯುಗವನ್ನು ಹುಟ್ಟುಹಾಕುತ್ತದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಸಮಾರಂಭವು ರವೀಂದ್ರನಾಥ ಟಾಗೋರ್ ಅವರ ಜನ್ಮದಿನದಂದು ನಡೆಯುತ್ತಿರುವುದು ವಿಶೇಷವಾಗಿದೆ.
ಈ ಸಮಾರಂಭವನ್ನು ಬ್ರಿಗೇಡ್ ಪ್ಯಾರೇಡ್ ಗ್ರೌಂಡ್‌ನಲ್ಲಿ ಭವ್ಯವಾಗಿ ಆಯೋಜಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು, ರವೀಂದ್ರ ಸಂಗೀತ ಮತ್ತು ಸಾಂಪ್ರದಾಯಿಕ ಅಂಶಗಳು ಸೇರಿವೆ. ಈ ಸಮಾರಂಭಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ವೇಳೆ ಇಡೀ ಕೊಲ್ಕತ್ತಾ ನಗರ ಕೇಸರಿಮಯವಾಗಿದ್ದು ವಿಶೇಷವಾಗಿದೆ.
