ಟಿವಿಕೆ ಶಾಸಕಾಂಗ ಪಕ್ಷದ ನಾಯಕನಾಗಿ ದಳಪತಿ ವಿಜಯ್ ಆಯ್ಕೆ

Untitled design 2026 05 05T163431.103

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಸಾಧನೆ ಮಾಡಿರುವ ನಟ ದಳಪತಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮೊದಲ ಬಾರಿಗೆ ಚುನಾವಣೆಗೆ ಕಣಕ್ಕಿಳಿದ ಈ ಹೊಸ ಪಕ್ಷವು 108 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಹಿನ್ನೆಲೆ ಸರ್ಕಾರ ರಚನೆಗೆ ಟಿವಿಕೆ ಚುರುಕುಗೊಂಡಿದೆ.

ಚುನಾವಣಾ ಫಲಿತಾಂಶದ ಬಳಿಕ ನಡೆದ ಮೊದಲ ಶಾಸಕರ ಸಭೆ ಪಣಿಯೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಜರುಗಿತು. ಈ ಸಭೆಯಲ್ಲಿ ಗೆದ್ದ ಎಲ್ಲಾ ಶಾಸಕರು ಭಾಗವಹಿಸಿದ್ದು, ವಿಜಯ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಏಕಮತದಿಂದ ಆಯ್ಕೆ ಮಾಡಲಾಯಿತು. 107 ಶಾಸಕರು ಸಭೆಯಲ್ಲಿ ಹಾಜರಿದ್ದು, ಯಾರೂ ವಿರೋಧ ವ್ಯಕ್ತಪಡಿಸದೆ ಒಮ್ಮತದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಧುರೈ ಸೆಂಟ್ರಲ್ ಕ್ಷೇತ್ರದ ಟಿವಿಕೆ ಶಾಸಕ ಮಾದರ್ ಬದ್ರುದ್ದೀನ್, “ರಾಜ್ಯದಲ್ಲಿ ಟಿವಿಕೆ ಸರ್ಕಾರ ರಚನೆ ಮಾಡುವುದು ಖಚಿತ. ನಮಗೆ 130ರಿಂದ 150 ಶಾಸಕರ ಬೆಂಬಲ ಸಿಗುವ ನಿರೀಕ್ಷೆಯಿದೆ. ವಿಜಯ್ ಅವರ ನಾಯಕತ್ವದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಿವಿಕೆ 108 ಸ್ಥಾನಗಳನ್ನು ಗೆದ್ದಿದ್ದು, ಸರಳ ಬಹುಮತಕ್ಕೆ ಇನ್ನೂ ಕೆಲವು ಶಾಸಕರ ಬೆಂಬಲ ಅಗತ್ಯವಿದೆ. ಈ ಹಿನ್ನೆಲೆ ಇತರೆ ಪಕ್ಷಗಳೊಂದಿಗೆ ಚರ್ಚೆಗಳು ನಡೆಯುತ್ತಿದ್ದು, ಬೆಂಬಲ ಪಡೆದು ಸರ್ಕಾರ ರಚನೆಗೆ ಮುಂದಾಗುತ್ತಿದೆ.

ಇದಕ್ಕೂ ಮಧ್ಯೆ ವಿಜಯ್ ಅವರ ವೈಯಕ್ತಿಕ ರಾಜಕೀಯ ನಿರ್ಧಾರವೂ ಗಮನ ಸೆಳೆದಿದೆ. ಈ ಬಾರಿ ಅವರು ತಿರುಚ್ಚಿ ಪೂರ್ವ ಮತ್ತು ಪೆರಂಬೂರು ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡೂ ಕಡೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ನಿಯಮದ ಪ್ರಕಾರ, ಇಬ್ಬರು ಕ್ಷೇತ್ರಗಳಿಂದ ಗೆದ್ದ ಅಭ್ಯರ್ಥಿ ಒಂದೇ ಸ್ಥಾನವನ್ನು ಉಳಿಸಿಕೊಂಡು ಮತ್ತೊಂದಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.

ಈ ಹಿನ್ನೆಲೆ ವಿಜಯ್ ತಿರುಚ್ಚಿ ಪೂರ್ವ ಕ್ಷೇತ್ರಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ಅವರು ಪೆರಂಬೂರು ಕ್ಷೇತ್ರದಿಂದ ಶಾಸಕರಾಗಿ ಮುಂದುವರಿಯಲಿದ್ದಾರೆ. ತಿರುಚ್ಚಿ ಪೂರ್ವ ಕ್ಷೇತ್ರದಲ್ಲಿ ತೆರವಾಗಲಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಈ ಉಪಚುನಾವಣೆಗೆ ಟಿವಿಕೆ ತನ್ನ ಅಭ್ಯರ್ಥಿಯಾಗಿ ಕು.ಪ. ಕೃಷ್ಣನ್ ಅವರನ್ನು ಮುಂದಿರಿಸಲು ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Exit mobile version