ತಮಿಳುನಾಡಿನಲ್ಲಿ ದಳಪತಿ ದರ್ಬಾರ್ ಶುರು: ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ

Untitled design 2026 05 10T103038.311

ಚೆನ್ನೈ: ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಚರಿತ್ರೆ ಸೃಷ್ಟಿಸಿರುವ ನಟ ಮತ್ತು ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಸ್ಥಾಪಕ ವಿಜಯ್ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಜೋಸೆಫ್ ವಿಜಯ್ ಅವರಿಗೆ ಪ್ರಮಾಣವಚನ ಬೋಧಿಸಿದರು. ತಮಿಳುನಾಡು ರಾಜಕೀಯದಲ್ಲಿ ವಿಜಯ್ ಅವರ ನೇತೃತ್ವದಲ್ಲಿ ‘ದಳಪತಿ ಯುಗ’ ಆರಂಭವಾಗಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್, ತಾಯಿ ಶೋಭಾ, ಕುಟುಂಬದ ಸದಸ್ಯರು ಹಾಗೂ ನಟಿ ತ್ರಿಷಾ ಕೃಷ್ಣನ್ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಮಾರಂಭದ ವೇಳೆ ಅಭಿಮಾನಿಗಳ ಘೋಷಣೆಗಳಿಂದ ಕ್ರೀಡಾಂಗಣ ಮೊಳಗುತ್ತಿತ್ತು.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷ ಅಚ್ಚರಿಯ ಫಲಿತಾಂಶ ದಾಖಲಿಸಿತ್ತು. ಕಾಂಗ್ರೆಸ್, ಸಿಪಿಐ ಹಾಗೂ ಸಿಪಿಐ(ಎಂ) ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಪಡೆದುಕೊಂಡರು. ಒಟ್ಟು 120 ಶಾಸಕರ ಬೆಂಬಲದೊಂದಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ ಬಳಿಕ ಇಂದು ವಿಜಯ್ ಅಧಿಕೃತವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

1967ರ ಬಳಿಕ ತಮಿಳುನಾಡಿನಲ್ಲಿ ಡಿಎಂಕೆ ಅಥವಾ ಎಐಎಡಿಎಂಕೆ ಹೊರತುಪಡಿಸಿ ಮತ್ತೊಂದು ಪಕ್ಷ ಅಧಿಕಾರಕ್ಕೇರಿರುವುದು ಇದೇ ಮೊದಲ ಬಾರಿ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಗೆ ವಿಜಯ್ ಕಾರಣರಾಗಿದ್ದಾರೆ. ಸಿನಿತಾರೆಯಾಗಿ ಅಪಾರ ಜನಪ್ರಿಯತೆ ಗಳಿಸಿದ್ದ ವಿಜಯ್ ಇದೀಗ ರಾಜಕೀಯ ನಾಯಕನಾಗಿಯೂ ಜನಮನ್ನಣೆ ಪಡೆದಿದ್ದಾರೆ.

ಚುನಾವಣಾ ಪ್ರಚಾರದ ಸಮಯದಲ್ಲಿ ಯುವಜನತೆ, ಉದ್ಯೋಗ, ಶಿಕ್ಷಣ, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಅಭಿವೃದ್ಧಿ ಕುರಿತ ಭರವಸೆಗಳನ್ನು ನೀಡಿದ್ದ ವಿಜಯ್, ಜನರ ನಿರೀಕ್ಷೆಗಳನ್ನು ಈಡೇರಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಪ್ರಮಾಣವಚನ ಬಳಿಕ ಮಾತನಾಡಿದ ಅವರು, “ಇದು ನನ್ನ ಗೆಲುವಲ್ಲ, ತಮಿಳುನಾಡಿನ ಜನರ ಗೆಲುವು. ಜನರ ಆಶಯಗಳಿಗೆ ತಕ್ಕಂತೆ ಪಾರದರ್ಶಕ ಆಡಳಿತ ನೀಡುತ್ತೇವೆ” ಎಂದು ಹೇಳಿದ್ದಾರೆ.

Exit mobile version