ನವದೆಹಲಿ: ಭಾರತದ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ಆರೋಗ್ಯ ಕಾರಣಗಳಿಂದ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸೋಮವಾರ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಧಂಖರ್, ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಸ್ಥಾನವನ್ನು ತೊರೆಯುವ ತೀರ್ಮಾನವನ್ನು ಘೋಷಿಸಿದ್ದಾರೆ.
ಜಗದೀಪ್ ಧಂಖರ್ ತಮ್ಮ ರಾಜೀನಾಮೆ ಪತ್ರದಲ್ಲಿ, “ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಗಂಭೀರವಾಗಿ ಪಾಲಿಸಲು, ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ,” ಎಂದು ತಿಳಿಸಿದ್ದಾರೆ. ತಮ್ಮ ಕಾರ್ಯಾವಧಿಯಲ್ಲಿ ಭಾರತದ ಆರ್ಥಿಕ ಪ್ರಗತಿ ಮತ್ತು ಅಭೂತಪೂರ್ವ ಘಾತೀಯ ಅಭಿವೃದ್ಧಿಯ ಈ ಐತಿಹಾಸಿಕ ಕಾಲಘಟ್ಟದಲ್ಲಿ ಸೇವೆ ಸಲ್ಲಿಸಿದ್ದು ತಮಗೆ ಗೌರವ ಮತ್ತು ತೃಪ್ತಿಯ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಗದೀಪ್ ಧಂಖರ್ ಅವರು 2022ರ ಆಗಸ್ಟ್‌ನಲ್ಲಿ ಭಾರತದ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯಸಭೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಅವರು, ತಮ್ಮ ಕಾರ್ಯಕ್ಷಮತೆ ಮತ್ತು ಸಂವಿಧಾನಾತ್ಮಕ ಜವಾಬ್ದಾರಿಗಳಿಗೆ ಒತ್ತು ನೀಡುವ ಮೂಲಕ ಗಮನ ಸೆಳೆದಿದ್ದರು. ರಾಜಸ್ಥಾನದಿಂದ ರಾಜಕೀಯ ಜೀವನ ಆರಂಭಿಸಿದ ಧಂಖರ್, ತಮ್ಮ ವಕೀಲ ವೃತ್ತಿಯಿಂದ ಹಿಡಿದು ರಾಜಕೀಯದವರೆಗೆ ದೀರ್ಘವಾದ ಸೇವೆ ಸಲ್ಲಿಸಿದ್ದಾರೆ. ಅವರು 2019ರಿಂದ 2022ರವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು.