ವಂದೇ ಮಾತರಂಗೆ ಅವಮಾನ ಮಾಡಿದರೆ ಶಿಕ್ಷೆ? ಕೇಂದ್ರದ ಹೊಸ ಹೆಜ್ಜೆ

ಶಿ (9)

ನವದೆಹಲಿ, ಜುಲೈ (24): ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ ಹೆಚ್ಚಿನ ಕಾನೂನು ರಕ್ಷಣೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದೆ. ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರೈ ಅವರು ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ, 2026’ ಅನ್ನು ಸದನದಲ್ಲಿ ಮಂಡಿಸಿದ್ದು, ಈ ಪ್ರಸ್ತಾವ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಪ್ರಸ್ತುತ ಜಾರಿಯಲ್ಲಿರುವ 1971ರ ಕಾಯ್ದೆಯು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಮಾತ್ರ ಕಾನೂನು ರಕ್ಷಣೆಯನ್ನು ಒದಗಿಸುತ್ತದೆ. ಹೊಸ ತಿದ್ದುಪಡಿ ಮೂಲಕ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೂ ಇದೇ ರೀತಿಯ ಕಾನೂನು ರಕ್ಷಣೆ ನೀಡುವ ಉದ್ದೇಶ ಸರ್ಕಾರದ್ದಾಗಿದೆ. ಈ ಮಸೂದೆ ಜಾರಿಯಾದರೆ, ವಂದೇ ಮಾತರಂ ಆಲಾಪನೆಗೆ ಅಡ್ಡಿಪಡಿಸುವುದು, ಉದ್ದೇಶಪೂರ್ವಕವಾಗಿ ಅವಮಾನಿಸುವುದು ಅಥವಾ ಗೌರವಕ್ಕೆ ಧಕ್ಕೆ ತರುವ ಕೃತ್ಯಗಳನ್ನು ಅಪರಾಧವೆಂದು ಪರಿಗಣಿಸುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದ ಪ್ರಕಾರ, ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ‘ವಂದೇ ಮಾತರಂ’ ಗೀತೆ ಲಕ್ಷಾಂತರ ಜನರಲ್ಲಿ ದೇಶಭಕ್ತಿಯ ಚೈತನ್ಯ ಮೂಡಿಸಿತ್ತು. ರಾಷ್ಟ್ರದ ಏಕತೆ ಮತ್ತು ರಾಷ್ಟ್ರೀಯ ಗೌರವದ ಸಂಕೇತವಾಗಿರುವ ಈ ಗೀತೆಗೆ ಸೂಕ್ತ ಕಾನೂನು ರಕ್ಷಣೆ ನೀಡುವುದು ಕಾಲದ ಅಗತ್ಯವಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಬಿಜೆಪಿ ಸಂಸದ ಸಂಜಯ್ ಸೇಠ್ ಈ ಕ್ರಮವನ್ನು ಸ್ವಾಗತಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ವಂದೇ ಮಾತರಂ ಗೀತೆಯ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಗೌರವವನ್ನು ಗಮನಿಸಿದರೆ, ಅದರ ಘನತೆಯನ್ನು ಕಾಪಾಡಲು ಈ ಕಾನೂನು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಆದರೆ, ಈ ಪ್ರಸ್ತಾವಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ಈ ಮಸೂದೆ ಸಂವಿಧಾನದಲ್ಲಿ ನಾಗರಿಕರಿಗೆ ನೀಡಲಾಗಿರುವ ಕೆಲವು ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ವಿಶೇಷವಾಗಿ ವಾಕ್ ಸ್ವಾತಂತ್ರ್ಯ, ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಧಿಗಳ ಮೇಲೆ ಪರಿಣಾಮ ಬೀರುವ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಕೂಡ ಈ ವಿಧೇಯಕವನ್ನು ವಿರೋಧಿಸಿದ್ದು, ದೇಶಭಕ್ತಿಯನ್ನು ಕಾನೂನಿನ ಮೂಲಕ ಬಲವಂತವಾಗಿ ಹೇರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮಸೂದೆ ಕುರಿತ ಚರ್ಚೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

Exit mobile version