ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಆರೋಪಿಯ ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು

123 (14)

ಉತ್ತರ ಪ್ರದೇಶದ ಬಹ್ರೈಚ್​​ನ ವಿಶೇಷ್‌ಗಂಜ್ ಪ್ರದೇಶದಲ್ಲಿ ಅತ್ಯಾಚಾರ ನಡೆಸಿದ ಆರೋಪಿಯನ್ನು ಎತ್ತಿನ ಗಾಡಿಗೆ ಕಟ್ಟಿ, ಸ್ಥಳೀಯರು ಆತನ ಮೇಲೆ ಹಲ್ಲೆ ಮಾಡಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವಿಡಿಯೋದಲ್ಲಿ 22 ವರ್ಷದ ಯುವಕನ ದೇಹವನ್ನು ಬೆತ್ತಲೆಯಾಗಿಸಿ, ಎತ್ತಿನ ಗಾಡಿಗೆ ಕಟ್ಟಿ ಹಾಕಲಾಗಿದೆ. ಕೆಲವರು ನಾಯಿಯನ್ನು ಅವನ ಮೇಲೆ ದಾಳಿ ಮಾಡಲು ಪ್ರಚೋದಿಸುತ್ತಿರುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದು.

ಗುರುವಾರ ಈ ವೀಡಿಯೊ ವೈರಲ್ ಆದ ನಂತರ ಆತನ ಕುಟುಂಬವು ಸ್ಥಳೀಯ ಪೊಲೀಸರಿಗೆ ದೂರು ನೀಡಿತು. “ಮಹಿಳೆಯೊಬ್ಬರ ಲಿಖಿತ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಹಲ್ಲೆ ಮತ್ತು ಹಾನಿಗಾಗಿ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಪಾಂಡೆ ತಿಳಿಸಿದ್ದಾರೆ.

ಏಪ್ರಿಲ್ 3ರಂದು ಹಳ್ಳಿಯ ಬಳಿ ತನ್ನ ಸೋದರ ಮಾವನನ್ನು ಹಗ್ಗದಿಂದ ಕಟ್ಟಿ ಥಳಿಸಲಾಯಿತು ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ರಮೇಶ್ ಪಾಂಡೆ ಹೇಳಿದ್ದಾರೆ.

“ಈ ಘಟನೆಯಲ್ಲಿ ಎರಡು ವಿಭಿನ್ನ ಸಮುದಾಯಗಳ ವ್ಯಕ್ತಿಗಳು ಭಾಗಿಯಾಗಿದ್ದರೂ, ಕೋಮು ಉದ್ವಿಗ್ನತೆಗೆ ಯಾವುದೇ ಪುರಾವೆಗಳಿಲ್ಲ. “ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.

“ಹಲ್ಲೆಗೆ ಸಂಬಂಧಿಸಿದಂತೆ ಈಗ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಅತ್ಯಾಚಾರ ಪ್ರಕರಣ ಮತ್ತು ಗುಂಪು ಹಿಂಸಾಚಾರದ ಎರಡು ವಿಷಯದಲ್ಲೂ ತನಿಖೆ ನಡೆಯುತ್ತಿದೆ” ಎಂದು ಅವರು ಉಪ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಪಾಂಡೆ ಹೇಳಿದ್ದಾರೆ.

 

    Exit mobile version