ಉತ್ತರ ಪ್ರದೇಶ: ಅಕ್ರಮ ಸಂಬಂಧದದಲ್ಲಿದ್ದ ಮಹಿಳೆಯೊಬ್ಬಳು 15 ವರ್ಷಗಳ ಕಾಲ ಜೊತೆಗಿದ್ದ ಪತಿಯನ್ನೇ ಅತ್ಯಂತ ಅಮಾನುಷವಾಗಿ ಕೊಲೆ ಮಾಡಿ, ಶವವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದಿದೆ.
ಡಿಸೆಂಬರ್ 15 ರಂದು ಚಂದೌಸಿಯ ಪತ್ವಾ ರಸ್ತೆಯ ಬಳಿ ತೀರ ಕೆಟ್ಟ ವಾಸನೆ ಬರುತ್ತಿದ್ದ ಪಾಲಿಥಿನ್ ಚೀಲಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಚೀಲ ತೆರೆದಾಗ ಕತ್ತರಿಸಿದ ಕೈಕಾಲುಗಳು ಸೇರಿದಂತೆ ವಿಕಾರವಾದ ಮಾನವ ಅವಶೇಷಗಳು ಪತ್ತೆಯಾದವು. ಶವದ ತಲೆ, ಕೈ ಮತ್ತು ಕಾಲುಗಳನ್ನು ಪ್ರತ್ಯೇಕವಾಗಿ ಕತ್ತರಿಸಿ ಅತ್ಯಂತ ಕ್ರೂರವಾಗಿ ದೇಹವನ್ನ ಛಿದ್ರಗೊಳಿಸಲಾಗಿತ್ತು.
ಕತ್ತರಿಸಿದ ಕೈಗಳಲ್ಲೊಂದರಲ್ಲಿ ‘ರಾಹುಲ್’ ಎಂಬ ಟ್ಯಾಟೂ ಇದ್ದುದನ್ನು ಗಮನಿಸಿದ ಪೊಲೀಸರು, ಕಾಣೆಯಾದವರ ಪಟ್ಟಿಯನ್ನು ಪರಿಶೀಲಿಸಿದರು. ಈ ವೇಳೆ ನವೆಂಬರ್ 18 ರಂದು ಚಂದೌಸಿಯ ಶೂ ವ್ಯಾಪಾರಿ ರಾಹುಲ್ (40) ಎಂಬವರು ಕಾಣೆಯಾಗಿದ್ದಾರೆ ಎಂದು ಅವರ ಪತ್ನಿ ರೂಬಿ ದೂರು ನೀಡಿದ್ದು ಪತ್ತೆಯಾಯಿತು. ತನಿಖೆ ನಡೆಸಿದಾಗ ಆ ಅವಶೇಷಗಳು ರಾಹುಲ್ ಅವರದ್ದೇ ಎಂದು ದೃಢಪಟ್ಟಿದೆ.
ತನಿಖೆಯ ವೇಳೆ ರೂಬಿಯ ಗೊಂದಲಮಯ ಹೇಳಿಕೆಗಳಿಂದ ಪೊಲೀಸರಿಗೆ ಆಕೆಯ ಮೇಲೆ ಅನುಮಾನ ಮೂಡಿತು. ಈ ವೇಳೆ ರಾಹುಲ್ ಅವರ 10 ವರ್ಷದ ಮಗಳು ನೀಡಿದ ಹೇಳಿಕೆ ಪೊಲೀಸರನ್ನು ದಿಕ್ಕನ್ನೇ ಬದಲಿಸಿತು. ತಂದೆ-ತಾಯಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಮೂವರು ವ್ಯಕ್ತಿಗಳು ಆಗಾಗ್ಗೆ ಮನೆಗೆ ಬರುತ್ತಿದ್ದರು. ಅಮ್ಮನೇ ಇದಕ್ಕೆಲ್ಲ ಕಾರಣ, ಆಕೆಯನ್ನು ಶಿಕ್ಷಿಸಿ ಎಂದು ಮಗಳು ಪೊಲೀಸರ ಮುಂದೆ ಕಣ್ಣೀರಿಟ್ಟಳು. ತಾಯಿಯ ವಿರುದ್ದ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದಾಗ ರೂಬಿ ತನ್ನ ಪ್ರಿಯಕರ ಗೌರವ್ ಹಾಗೂ ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿ ಈ ಕೃತ್ಯ ಎಸಗಿರುವುದು ಸಾಬೀತಾಯಿತು.
ರಾಹುಲ್ ಮತ್ತು ರೂಬಿ ದಂಪತಿಗೆ 15 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ ಗೌರವ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ರೂಬಿ, ತನ್ನ ಹಾದಿಗೆ ಅಡ್ಡವಾಗಿದ್ದ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಳು. ನವೆಂಬರ್‌ನಲ್ಲಿ ಪತಿಯನ್ನು ಕೊಂದು, ಶವವನ್ನು ಮನೆಯ ಶೌಚಾಲಯದಲ್ಲಿಟ್ಟು ಕಬ್ಬಿಣದ ರಾಡ್ ಹಾಗೂ ಇತರ ವಸ್ತುಗಳನ್ನು ಬಳಸಿ ತುಂಡು ಮಾಡಿದ್ದಳು. ನಂತರ ಆ ಭಾಗಗಳನ್ನು ಬೇರೆ ಬೇರೆ ಕಡೆ ಎಸೆದು, ಪತಿ ಕಾಣೆಯಾಗಿದ್ದಾರೆ ಎಂದು ನಾಟಕವಾಡಿದ್ದಳು.
ಪೊಲೀಸರುಕ ರಾಹುಲ್ ಮನೆಯನ್ನ ಪರಿಶೀಲಿಸಿದಾಗ, ಮನೆಯಲ್ಲಿ ರಕ್ತದ ಕಲೆಗಳುಳ್ಳ ಕಬ್ಬಿಣದ ರಾಡ್, ಬ್ಯಾಗ್, ಸ್ಕೂಟರ್ ಮತ್ತು ವಿದ್ಯುತ್ ಹೀಟರ್ ಪತ್ತೆಯಾಗಿವೆ. ಸದ್ಯಕ್ಕೆ ರೂಬಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದ್ದು, ರಾಹುಲ್ ಅವರ ಪತ್ತೆಯಾಗದ ತಲೆ ಹಾಗೂ ದೇಹದ ಇತರೆ ಭಾಗಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
