ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭೂಪಟಗಳ ವಿವಾದ ಹೊಸದೇನಲ್ಲ. ಆದರೆ, ದೊಡ್ಡಣ್ಣ ಅಮೆರಿಕ ಭಾರತದ ಅವಿಭಾಜ್ಯ ಅಂಗಗಳಾದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಅಕ್ಸಾಯ್ ಚಿನ್ ಪ್ರದೇಶಗಳನ್ನು ಭಾರತದ ಭೂಪಟದ ಭಾಗವಾಗಿ ತೋರಿಸಿ, ನಂತರ ಆ ಪೋಸ್ಟ್ ಅನ್ನು ಡಿಲಿಟ್ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಘಟನೆಯ ಹಿನ್ನೆಲೆ:
ಫೆಬ್ರವರಿ 7 ರಂದು ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಭಾಗವಾಗಿ ಅಮೆರಿಕದ ಯುಎಸ್‌ಟಿಆರ್ ತನ್ನ ಅಧಿಕೃತ ‘X’ ಖಾತೆಯಲ್ಲಿ ಒಂದು ಗ್ರಾಫಿಕ್ ಪೋಸ್ಟ್ ಹಂಚಿಕೊಂಡಿತ್ತು. ಇದರಲ್ಲಿ ಅಮೆರಿಕದ ರಫ್ತುಗಳ ಮೇಲೆ ಭಾರತವು ಸುಂಕ ಕಡಿತಗೊಳಿಸಿರುವುದನ್ನು ವಿವರಿಸಲಾಗಿತ್ತು. ಈ ಗ್ರಾಫಿಕ್‌ನಲ್ಲಿ ಬಳಸಲಾಗಿದ್ದ ಭಾರತದ ನಕ್ಷೆಯಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಸಂಪೂರ್ಣ ಭಾಗವನ್ನು (PoK ಮತ್ತು ಅಕ್ಸಾಯ್ ಚಿನ್ ಸೇರಿದಂತೆ) ಭಾರತದ ಗಡಿಯೊಳಗೆ ತೋರಿಸಲಾಗಿತ್ತು.
ಅಚ್ಚರಿ ಮೂಡಿಸಿದ್ದ ಅಮೆರಿಕದ ನಡೆ:
ಸಾಮಾನ್ಯವಾಗಿ ಅಮೆರಿಕದ ಅಧಿಕೃತ ಸಂಸ್ಥೆಗಳು ಜಮ್ಮು-ಕಾಶ್ಮೀರವನ್ನು ವಿವಾದಿತ ಪ್ರದೇಶವೆಂದು ಬಿಂಬಿಸಲು ಭೂಪಟದಲ್ಲಿ ಪ್ರತ್ಯೇಕ ರೇಖೆಗಳನ್ನು ಬಳಸುತ್ತವೆ. ಆದರೆ, ಈ ಬಾರಿ ಯಾವುದೇ ವಿಭಜನಾ ರೇಖೆಗಳಿಲ್ಲದೆ ಇಡೀ ಭೂಭಾಗವನ್ನು ಭಾರತದ್ದೇ ಎಂದು ತೋರಿಸಿದ್ದು ಭಾರತೀಯರಲ್ಲಿ ಸಂತಸ ಮೂಡಿಸಿತ್ತು. ಚೀನಾ ಮತ್ತು ಪಾಕಿಸ್ತಾನದೊಂದಿಗೆ ಅಮೆರಿಕದ ಸಂಬಂಧ ಅಷ್ಟಕ್ಕಷ್ಟೇ ಇರುವುದರಿಂದ, ವಾಷಿಂಗ್ಟನ್ ಉದ್ದೇಶಪೂರ್ವಕವಾಗಿಯೇ ಭಾರತಕ್ಕೆ ಈ ಬೆಂಬಲ ನೀಡಿದೆ ಎಂದು ವಿಶ್ಲೇಷಕರು ಭಾವಿಸಿದ್ದರು.
ಪೋಸ್ಟ್ ಅಳಿಸಿದ್ದೇಕೆ ?
ಆದರೆ, ಈ ಪೋಸ್ಟ್ ಹಂಚಿಕೆಯಾದ ಕೆಲವೇ ದಿನಗಳಲ್ಲಿ ಯುಎಸ್‌ಟಿಆರ್ ಅದನ್ನು ತನ್ನ ಖಾತೆಯಿಂದ ಡಿಲಿಟ್ ಮಾಡಿದೆ. ಇದು ಕೇವಲ ತಾಂತ್ರಿಕ ತಪ್ಪೇ ಅಥವಾ ಚೀನಾ-ಪಾಕಿಸ್ತಾನದ ಒತ್ತಡಕ್ಕೆ ಮಣಿದು ತೆಗೆದುಹಾಕಲಾಗಿದೆಯೇ ಎಂಬ ಸಂಶಯ ಶುರುವಾಗಿದೆ. ಅಮೆರಿಕವು ಅಧಿಕೃತವಾಗಿ ಕಾಶ್ಮೀರವನ್ನು ಇಂದಿಗೂ ವಿವಾದಿತ ಪ್ರದೇಶವೆಂದೇ ಪರಿಗಣಿಸುತ್ತಿರುವುದರಿಂದ, ತನ್ನ ಹಳೆಯ ನಿಲುವಿಗೆ ನಿಲ್ಲಲು ಈ ಪೋಸ್ಟ್ ಡಿಲೀಟ್ ಮಾಡಿರಬಹುದು ಎನ್ನಲಾಗುತ್ತಿದೆ.
ನಕ್ಷೆಯ ವಿವಾದ ಏನೇ ಇರಲಿ, ಭಾರತ ಮಾತ್ರ ತನ್ನ ನಿಲುವಿನಲ್ಲಿ ಅಚಲವಾಗಿದೆ. ಜಮ್ಮು-ಕಾಶ್ಮೀರ, ಲಡಾಖ್ ಮತ್ತು ಅಕ್ಸಾಯ್ ಚಿನ್ ಪ್ರದೇಶಗಳು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗ ಎಂದು ನವದೆಹಲಿ ಜಾಗತಿಕ ವೇದಿಕೆಗಳಲ್ಲಿ ಸಾರಿ ಹೇಳುತ್ತಿದೆ. ಅಮೆರಿಕದ ಈ ಡಿಲೀಟ್ ಪಾಲಿಟಿಕ್ಸ್ ಭಾರತದ ಆಂತರಿಕ ಭದ್ರತೆ ಮತ್ತು ಗಡಿ ನಿಲುವಿನ ಮೇಲೆ ಯಾವುದೇ ಪರಿಣಾಮ ಬೀರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
