ಸುಂಕ ಸಮರದ ನಡುವೆ ಭಾರತಕ್ಕೆ ಜೆ.ಡಿ. ವ್ಯಾನ್ಸ್: ಮೋದಿಯೊಂದಿಗೆ ದ್ವಿಪಕ್ಷೀಯ ಮಾತುಕತೆ

123 (79)

ನವದೆಹಲಿ: ಅಮೆರಿಕದ ಸುಂಕ ಸಮರದ ನಡುವೆ ಯುಎಸ್ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಮ್ಮ ಕುಟುಂಬದೊಂದಿಗೆ ಇಂದು ಭಾರತಕ್ಕೆ ಆಗಮಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಜೆ.ಡಿ. ವ್ಯಾನ್ಸ್ ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿಯಿದು. ಜೆ.ಡಿ. ವ್ಯಾನ್ಸ್, ತಮ್ಮ ಪತ್ನಿ ಉಷಾ ವ್ಯಾನ್ಸ್ ಮತ್ತು ಮಕ್ಕಳಾದ ಇವಾನ್, ವಿವೇಕ್, ಮಿರಾಬೆಲ್ ಜೊತೆಗೆ ಇಂದು ಬೆಳಿಗ್ಗೆ 10 ಗಂಟೆಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ಭೇಟಿಯಲ್ಲಿ ಅವರು ನಾಲ್ಕು ದಿನಗಳ ಕಾಲ ಭಾರತದ ವಿವಿಧ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ.

ADVERTISEMENT
ADVERTISEMENT

ಪಾಲಂ ವಿಮಾನ ನಿಲ್ದಾಣದಲ್ಲಿ ಕೇಂದ್ರದ ಹಿರಿಯ ಸಚಿವರು ವ್ಯಾನ್ಸ್ ಕುಟುಂಬವನ್ನು ರಾಜಸ್ಥಾನಿ ಶೈಲಿಯಲ್ಲಿ ಸ್ವಾಗತಿಸಿದರು. ಬಳಿಕ ಅವರು ದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿದರು. ವ್ಯಾನ್ಸ್ ಕುಟುಂಬ ಹಾರ ಹಾಕಿಕೊಂಡು ತೆಗೆದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿಯ ನಂತರ ಅವರು ಜೈಪುರ ಮತ್ತು ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ.

ಇಂದು ಸಂಜೆ 6:30ಕ್ಕೆ ಜೆ.ಡಿ. ವ್ಯಾನ್ಸ್ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಭಾರತ-ಯುಎಸ್ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಸಭೆಯಲ್ಲಿ ವ್ಯಾಪಾರ ಒಪ್ಪಂದಗಳು ಮತ್ತು ಭಾರತದ ಮೇಲಿನ ಸುಂಕದ ಕುರಿತು ಚರ್ಚೆ ನಡೆಯಲಿದೆ. ಮಾತುಕತೆಯ ಬಳಿಕ ಪ್ರಧಾನಿ ಮೋದಿ ವ್ಯಾನ್ಸ್ ಕುಟುಂಬಕ್ಕೆ ಮತ್ತು ಅವರೊಂದಿಗಿರುವ ಅಮೆರಿಕದ ಅಧಿಕಾರಿಗಳಿಗೆ ವಿಶೇಷ ಔತಣಕೂಟ ಆಯೋಜಿಸಿದ್ದಾರೆ. ಇದಾದ ನಂತರ ವ್ಯಾನ್ಸ್ ಕುಟುಂಬ ಜೈಪುರಕ್ಕೆ ತೆರಳಲಿದ್ದು, ಐಟಿಸಿ ಮೌರ್ಯ ಶೆರಾಟನ್ ಹೋಟೆಲ್‌ನಲ್ಲಿ ವಾಸ್ತವ್ಯವಿರಲಿದೆ.

ನಾಳೆ ಜೆ.ಡಿ. ವ್ಯಾನ್ಸ್ ಕೈಗಾರಿಕಾ ನಾಯಕರು, ಶಿಕ್ಷಣ ತಜ್ಞರು, ರಾಜತಾಂತ್ರಿಕರು, ವಿದೇಶಾಂಗ ನೀತಿ ತಜ್ಞರು ಮತ್ತು ಭಾರತೀಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಬಳಿಕ ಆಗ್ರಾಕ್ಕೆ ಭೇಟಿ ನೀಡಿ, ವಿಶ್ವ ಪ್ರಸಿದ್ಧ ತಾಜ್‌ಮಹಲ್, ಶಿಲ್ಪಗ್ರಾಮ್ ಮತ್ತು ಭಾರತೀಯ ಕಲಾಕೃತಿಗಳನ್ನು ಪ್ರದರ್ಶಿಸಿರುವ ಎಂಪೋರಿಯಮ್‌ಗೆ ಭೇಟಿ ನೀಡಲಿದ್ದಾರೆ. ಆಗ್ರಾದಿಂದ ಜೈಪುರಕ್ಕೆ ತೆರಳಿ, ಏಪ್ರಿಲ್ 24ರಂದು ಅಲ್ಲಿಂದ ಅಮೆರಿಕಕ್ಕೆ ಮರಳಲಿದ್ದಾರೆ.

Exit mobile version