ಹೈದರಾಬಾದ್: ಅಮೆರಿಕದ ವೀಸಾ (US Visa) ತಿರಸ್ಕರಿಸಲ್ಪಟ್ಟಿದ್ದಕ್ಕೆ ಖಿನ್ನತೆಗೆ ಒಳಗಾಗಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಹಿಳಾ ವೈದ್ಯೆ ಡಾ. ರೋಹಿಣಿ (38) ಹೈದರಾಬಾದ್‌ನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದರುವ ಘಟನೆ ಭಾನುವಾರ ನಡೆದಿದೆ.
ವೈದ್ಯೆ ರೋಹಿಣಿ ಹೈದರಾಬಾದ್‌ನ ತಮ್ಮ ಫ್ಲಾಟ್‌ನಲ್ಲಿ ಏಕಾಂಗಿಯಾಗಿದ್ದರು. ಭಾನುವಾರ ಬೆಳಗ್ಗೆ ಎಷ್ಟೇ ಬಾರಿ ಬಾಗಿಲು ಬಡಿದರೂ ಒಳಗಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರಿಂದ, ಮನೆಕೆಲಸದಾಕೆಗೆ ಅನುಮಾನ ಬಂದಿತು. ಈ ಬಗ್ಗೆ ಅವರು ಹೈದರಾಬಾದ್‌ನಲ್ಲೇ ವಾಸಿಸುತ್ತಿದ್ದ ರೋಹಿಣಿಯ ಕುಟುಂಬದವರಿಗೆ ತಿಳಿಸಿದರು.
ಮನೆಯವರು ತ್ವರಿತವಾಗಿ ಸ್ಥಳಕ್ಕೆ ಬಂದು ಬಾಗಿಲು ಒಡೆದು ನೋಡಿದಾಗ, ರೋಹಿಣಿ ಗಂಭೀರವಾಗಿ ಅಸುನೀಗಿದ್ದರು. ಘಟನೆಯನ್ನು ತಿಳಿದ ಪೊಲೀಸರು (Hyderabad Police) ಸ್ಥಳಕ್ಕೆ ಭೇಟಿ ಈಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದಂತೆ, ಮನೆಯವರು ಬಾಗಿಲು ಒಡೆದು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ದೃಢಪಡಿಸಿದರು.
ಪೊಲೀಸರು ನಡೆಸಿದತನಿಖೆಯಲ್ಲಿ ಒಂದು ಡೆತ್ ನೋಟ್ (ಸುಸೈಡ್ ನೋಟ್) ಪತ್ತೆಯಾಗಿದೆ. ಈ ನೋಟ್‌ನಲ್ಲಿ ಡಾ. ರೋಹಿಣಿ ತಮ್ಮ ಅಮೆರಿಕದ ವೀಸಾ ಅರ್ಜಿ ತಿರಸ್ಕರಿಸಲ್ಪಟ್ಟಿದ್ದಕ್ಕೆ ಗಾಢ ನಿರಾಶೆ ಮತ್ತು ಖಿನ್ನತೆಗೆ ಒಳಗಾಗಿದ್ದುದನ್ನು ಸ್ಪಷ್ಟಪಡಿಸಿದ್ದಾರೆ. ಕೆಲಸದ ಸಲುವಾಗಿ ಅಮೆರಿಕಾ ಪ್ರವಾಸಕ್ಕೆ ಹೋಗುವುದು ಅವರ ಕನಸಾಗಿತ್ತು ಮತ್ತು ವೀಸಾ ನಿರಾಕರಣೆಯು ಅವರಿಗೆ ಬಹಳ ಆಘಾತ ತಂದಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಮೃತ ವೈದ್ಯೆಯ ತಾಯಿ ಲಕ್ಷ್ಮಿ ಈ ಬಗ್ಗೆ ಮಾತನಾಡಿ, ನನ್ನ ಮಗಳು ತನ್ನ ವೃತ್ತಿಜೀವನದಲ್ಲಿ ಮುನ್ನಡೆಯಲು ಅಮೆರಿಕಕ್ಕೆ ಹೋಗಲು ಬಹಳ ಆಸಕ್ತಿಯಿಂದ ಕಾಯುತ್ತಿದ್ದಳು. ಆದರೆ ವೀಸಾ ನಿರಾಕರಣೆಯ ನಂತರ ಅವಳು ಬಹಳ ನಿರಾಶೆ ಮತ್ತು ಖಿನ್ನತೆಗೆ ಒಳಗಾಗಿದ್ದಳು. ನಾವು ಅವಳನ್ನು ಧೈರ್ಯಗೊಳಿಸಲು ಪ್ರಯತ್ನಿಸಿದೆವು, ಆದರೆ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಅತಿಯಾದ ನಿದ್ರೆ ಮಾತ್ರೆ ಸೇವಿಸಿ ಅಥವಾ ಇಂಜೆಕ್ಷನ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸುತ್ತಿದ್ದಾರೆ. ವರದಿ ಬಂದ ಬಳಿಕ ನಿಖರವಾದ ಮರಣ ಕಾರಣವನ್ನು ಅಧಿಕೃತವಾಗಿ ಘೋಷಿಸಲಾಗುವುದು. ಈ ಘಟನೆಯು ವೃತ್ತಿಪರ ಯುವಕರು ಮತ್ತು ವೈದ್ಯರು ಎದುರಿಸುತ್ತಿರುವ ಮಾನಸಿಕ ಒತ್ತಡ ಮತ್ತು ಖಿನ್ನತೆಯ ಗಂಭೀರ ಸಮಸ್ಯೆಯ ಕಡೆಗೆ ದೃಷ್ಟಿ ಸೆಳೆಯುತ್ತದೆ.
