ವಾಷಿಂಗ್ಟನ್ (ಜು.30, 2025): ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಸಂಬಂಧಗಳು ಹೊಸ ತಿರುವು ಪಡೆದುಕೊಂಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ರಫ್ತುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಈ ನಿರ್ಧಾರ ಆಗಸ್ಟ್ 1, 2025ರಿಂದ ಜಾರಿಗೆ ಬರಲಿದೆ. ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುಥ್ ಸೋಶಿಯಲ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ, “ಭಾರತ ನಮ್ಮ ಸ್ನೇಹಿತನಾಗಿದ್ದರೂ, ನಾವು ಅವರೊಂದಿಗೆ ಬಹಳ ಕಡಿಮೆ ವ್ಯವಹಾರ ಮಾಡಿದ್ದೇವೆ ಎಂಬುದನ್ನು ನೆನಪಿಡಿ, ಏಕೆಂದರೆ ಅವರ ಸುಂಕಗಳು ತುಂಬಾ ಹೆಚ್ಚು. ಮತ್ತು ವಿಶ್ವದಲ್ಲೇ ಅತ್ಯಧಿಕವಾಗಿವೆ ಮತ್ತು ಅವರು ಯಾವುದೇ ದೇಶಕ್ಕಿಂತ ಅತ್ಯಂತ ಕಠಿಣ ಮತ್ತು ಅಸಹ್ಯಕರವಾದ ವಿತ್ತೀಯವಲ್ಲದ ವ್ಯಾಪಾರ ಅಡೆತಡೆಗಳನ್ನು ಹೊಂದಿದ್ದಾರೆ. ಅಲ್ಲದೆ, ಅವರು ಯಾವಾಗಲೂ ತಮ್ಮ ಮಿಲಿಟರಿ ಉಪಕರಣಗಳ ಬಹುಪಾಲನ್ನು ರಷ್ಯಾದಿಂದ ಖರೀದಿಸಿದ್ದಾರೆ. ರಷ್ಯಾ ಉಕ್ರೇನ್‌ನಲ್ಲಿ ಹತ್ಯೆಯನ್ನು ನಿಲ್ಲಿಸಬೇಕೆಂದು ಎಲ್ಲರೂ ಬಯಸುವ ಸಮಯದಲ್ಲಿ ಚೀನಾದೊಂದಿಗೆ ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರರಾಗಿದ್ದಾರೆ. ಇವೆಲ್ಲವೂ ಒಳ್ಳೆಯ ವಿಚಾರವಲ್ಲ. ಆದ್ದರಿಂದ ಭಾರತವು ಆಗಸ್ಟ್ 1 ರಿಂದ 25% ಸುಂಕ ಹಾಗೂ ಅದರೊಂದಿಗೆ ಪೆನಾಲ್ಟಿಯನ್ನೂ ಹೊಂದಿರಲಿದೆ. ಈ ವಿಷಯದ ಬಗ್ಗೆ ನೀವು ಗಮನ ನೀಡಿದ್ದಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ.
ಈ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತು ಶೇ.22.8ರಷ್ಟು ಹೆಚ್ಚಾಗಿ $25.51 ಬಿಲಿಯನ್‌ಗೆ ತಲುಪಿದೆ. ಇದೇ ಅವಧಿಯಲ್ಲಿ ಆಮದು ಶೇ.11.68ರಷ್ಟು ಏರಿಕೆಯಾಗಿ $12.86 ಬಿಲಿಯನ್ ಆಗಿದೆ. ಈ ಅಂಕಿಅಂಶಗಳು ಎರಡು ದೇಶಗಳ ನಡುವಿನ ವ್ಯಾಪಾರ ಸಂಬಂಧದ ಬೆಳವಣಿಗೆಯನ್ನು ತೋರಿಸುತ್ತವೆ. ಆದರೆ, ಹೊಸ ಸುಂಕವು ಈ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು.
ಭಾರತ ಮತ್ತು ಅಮೆರಿಕದ ಅಧಿಕಾರಿಗಳು ತಿಂಗಳುಗಳಿಂದ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ, ಅಂತಿಮ ಒಪ್ಪಂದ ಇನ್ನೂ ರೂಪುಗೊಂಡಿಲ್ಲ. ಟ್ರಂಪ್, ಭಾರತೀಯ ಮಾರುಕಟ್ಟೆಗೆ ಅಮೆರಿಕದ ಸರಕುಗಳಿಗೆ ಹೆಚ್ಚಿನ ಪ್ರವೇಶಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಈ ಒತ್ತಡದ ಭಾಗವಾಗಿಯೇ ಈ ಸುಂಕ ಘೋಷಣೆಯಾಗಿದೆ ಎಂದು ತಿಳಿದುಬಂದಿದೆ. ಈ ವರ್ಷದ ಆರಂಭದಲ್ಲಿ ಟ್ರಂಪ್ ಶೇ.26ರಷ್ಟು ಸುಂಕವನ್ನು ಘೋಷಿಸಿದ್ದರು. ಆದರೆ ನಂತರ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಇತ್ತೀಚಿನ ಎಸ್‌ಬಿಐ ಅಧ್ಯಯನವು ಶೇ.20ರಷ್ಟು ಸ್ಥಿರ ಸುಂಕವು ಭಾರತದ ಜಿಡಿಪಿಯ ಮೇಲೆ 0.5% ನಷ್ಟವನ್ನುಂಟುಮಾಡಬಹುದು ಎಂದು ಎಚ್ಚರಿಕೆ ನೀಡಿದೆ. ಶೇ.25ರಷ್ಟು ಸುಂಕವು ಇನ್ನಷ್ಟು ಗಂಭೀರ ಪರಿಣಾಮ ಬೀರಬಹುದು. ಸುಂಕದಲ್ಲಿ ಪ್ರತಿ 1% ಹೆಚ್ಚಳವು ರಫ್ತು ಪ್ರಮಾಣದಲ್ಲಿ 0.5% ಕುಸಿತಕ್ಕೆ ಕಾರಣವಾಗಬಹುದು ಎಂದು ಅಧ್ಯಯನ ತಿಳಿಸಿದೆ.
