ಯೋಗಿ ಆದಿತ್ಯನಾಥ್ ತಾಯಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಬಿಹಾರದ ಖ್ಯಾತ ಮೌಲಾನಾ ಅಬ್ದುಲ್ಲಾ ಸಲೀಂ ಅರೆಸ್ಟ್‌

Untitled design 2026 03 31T201201.770

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿಯವರ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದ ಮೇಲೆ ಬಿಹಾರದ ಪ್ರಭಾವಿ ಧರ್ಮಗುರು ಮೌಲಾನಾ ಅಬ್ದುಲ್ಲಾ ಸಲೀಂ ಚತುರ್ವೇದಿ ಅವರನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (STF) ಸೋಮವಾರ ತಡರಾತ್ರಿ ಬಂಧಿಸಿದೆ. ಬಿಹಾರದ ಪೂರ್ಣಿಯಾದಲ್ಲಿ ಸಲೀಂನನ್ನು ವಶಕ್ಕೆ ಪಡೆದ ಅಧಿಕಾರಿಗಳು, ಹೆಚ್ಚಿನ ಕಾನೂನು ಪ್ರಕ್ರಿಯೆಗಾಗಿ ಉತ್ತರ ಪ್ರದೇಶಕ್ಕೆ ಕರೆತಂದಿದ್ದಾರೆ.

ವಿವಾದದ ಹಿನ್ನೆಲೆ

ಬಿಹಾರದಲ್ಲಿ ರಂಜಾನ್ ಮಾಸದ ಅಂಗವಾಗಿ ನಡೆದಿದ್ದ ಧಾರ್ಮಿಕ ಸಭೆಯೊಂದರಲ್ಲಿ ಮೌಲಾನಾ ಅಬ್ದುಲ್ಲಾ ಸಲೀಂ ಭಾಷಣ ಮಾಡಿದ್ದರು. ಈ ಭಾಷಣದ ವೇಳೆ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿಯವರ ತಾಯಿಯನ್ನು ಉಲ್ಲೇಖಿಸಿ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಇದು ಉತ್ತರ ಪ್ರದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ದಾಖಲಾದ ಪ್ರಕರಣಗಳು ಮತ್ತು ಕಾನೂನು ಕ್ರಮ

ಮೌಲಾನಾ ಸಲೀಂ ವಿರುದ್ಧ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಎಫ್‌ಐಆರ್ ದಾಖಲಾಗಿವೆ. ವಿಎಚ್‌ಪಿ ಮುಖಂಡ ಅಜಿತ್ ಪ್ರತಾಪ್ ಸಿಂಗ್ ನೀಡಿದ ದೂರಿನ ಮೇರೆಗೆ ನಗರ ಕೊಟ್ಟಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ರವಿ ಮಿಶ್ರಾ ಅವರ ದೂರಿನ ಮೇರೆಗೆ ಮಾರ್ಚ್ 7 ರಂದೇ ಎಫ್‌ಐಆರ್ ದಾಖಲಾಗಿತ್ತು. ಪೊಲೀಸರು ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ದ್ವೇಷ ಉತ್ತೇಜಿಸುವುದು (ಸೆಕ್ಷನ್ 196(1)(a)), ಧಾರ್ಮಿಕ ಭಾವನೆ ಕೆರಳಿಸುವುದು (299) ಮತ್ತು ಸುಳ್ಳು ಮಾಹಿತಿ ಪ್ರಸರಣ (353(1)) ಸೇರಿದಂತೆ ಕಠಿಣ ನಿಬಂಧನೆಗಳನ್ನು ಅನ್ವಯಿಸಿದ್ದಾರೆ.

ಈ ಹೇಳಿಕೆಯು ಬಲರಾಂಪುರ, ಬಸ್ತಿ, ಸೀತಾಪುರ ಮತ್ತು ಕಾನ್ಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳಿಗೆ ನಾಂದಿ ಹಾಡಿತು. ಬಿಜೆಪಿ ಶಾಸಕ ಸುರೇಂದ್ರ ದಿಲೇರ್ ಅವರು ಈ ವಿಡಿಯೋ ಕೋಮು ಸಾಮರಸ್ಯಕ್ಕೆ ಧಕ್ಕೆ ತರಬಹುದು ಎಂದು ಆತಂಕ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಸಂಸದ ಹಾಗೂ ನಟ ರವಿ ಕಿಶನ್ ಈ ನಡೆಯನ್ನು ಖಂಡಿಸಿ, ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ದೈವತ್ವದ ಸ್ಥಾನವಿದೆ, ಇಂತಹ ಕೀಳು ಮಟ್ಟದ ಹೇಳಿಕೆಗಳು ಸಹನೀಯವಲ್ಲ ಎಂದು ಕಿಡಿಕಾರಿದ್ದಾರೆ. ವಿಎಚ್‌ಪಿ ನಾಯಕರು ಮೌಲಾನಾ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಮೌಲಾನಾ ಅಬ್ದುಲ್ಲಾ ಸಲೀಂ ಯಾರು ?

ಬಿಹಾರದ ಅರಾರಿಯಾ ಜಿಲ್ಲೆಯ ಜೋಕಿಹತ್ ಮೂಲದ ಮೌಲಾನಾ ಅಬ್ದುಲ್ಲಾ ಸಲೀಂ ಒಬ್ಬ ಪ್ರಭಾವಿ ಇಸ್ಲಾಮಿಕ್ ಭಾಷಣಕಾರರು. ಇವರ ಭಾಷಣದ ಶೈಲಿ ವಿಶಿಷ್ಟವಾಗಿದ್ದು, ಕುರಾನ್ ಜೊತೆಗೆ ಭಗವದ್ಗೀತೆ ಮತ್ತು ರಾಮಾಯಣದ ಶ್ಲೋಕಗಳನ್ನು ಉಲ್ಲೇಖಿಸುವ ಮೂಲಕ ಚತುರ್ವೇದಿ ಎಂಬ ಬಿರುದಿನಿಂದಲೂ ಗುರುತಿಸಿಕೊಂಡಿದ್ದರು. ಆದರೆ, ಈಗಿನ ವಿವಾದಾತ್ಮಕ ಹೇಳಿಕೆಯು ಅವರ ಮೇಲೆ ಕಾನೂನು ಕ್ರಮ ಜರುಗುವಂತೆ ಮಾಡಿದೆ. ಸದ್ಯ ಬಿಹಾರದಿಂದ ಯುಪಿಗೆ ಕರೆತರಲಾದ ಮೌಲಾನಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಎಸ್‌ಟಿಎಫ್ ಸಜ್ಜಾಗಿದೆ.

Exit mobile version