ವರದಕ್ಷಿಣೆಗಾಗಿ ನವವಿವಾಹಿತೆ ಕೂಡಿಹಾಕಿ ಹಾವಿನಿಂದ ಕಚ್ಚಿಸಿದ ಅತ್ತೆ-ಮಾವ

Untitled design 2025 09 22t131525.296

ಉತ್ತರ ಪ್ರದೇಶ: ವರದಕ್ಷಿಣೆ ನೀಡದ ಕಾರಣಕ್ಕೆ ಕೋಪಗೊಂಡ ಅತ್ತೆ-ಮಾವಂದಿರು ನವವಿವಾಹಿತ ಮಹಿಳೆಯನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ, ಹಾವನ್ನು ಬಿಟ್ಟು ಕಚ್ಚಿಸಿದ ಘೋರ ಘಟನೆ ಉತ್ತರ ಪ್ರದೇಶದ ಕಾಲ್ಪುರದ ಕರ್ನಲ್ ಗಂಜ್‌ನಲ್ಲಿ ನಡೆದಿದೆ.

ರೇಷ್ಮಾ ಎಂಬ ಮಹಿಳೆ ಶಹನವಾಜ್ ಎಂಬಾತನನ್ನು 2021 ರ ಮಾರ್ಚ್ 19 ರಂದು ವಿವಾಹವಾದವಳು. ವಿವಾಹವಾದ ಕೆಲವೇ ತಿಂಗಳುಗಳಲ್ಲಿ ರೇಷ್ಮಾಳ ಕುಟುಂಬದ ಜೀವನದಲ್ಲಿ ಸಮಸ್ಯೆಗಳು ಆರಂಭವಾದವು. ಶಹನವಾಜ್‌ನ ಕುಟುಂಬವು ರೇಷ್ಮಾಳನ್ನು ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿತ್ತು. ರೇಷ್ಮಾಳ ಕುಟುಂಬವು ಈಗಾಗಲೇ 1.5 ಲಕ್ಷ ರೂಪಾಯಿಗಳನ್ನು ವರದಕ್ಷಿಣೆಯಾಗಿ ನೀಡಿತ್ತು. ಆದರೆ, ಶಹನವಾಜ್‌ನ ಕುಟುಂಬವು ಇದರ ಜೊತೆಗೆ ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿಗಳನ್ನು ಬೇಡಿಕೆಯಿಟ್ಟಿತ್ತು. ಈ ಬೇಡಿಕೆ ಈಡೇರದಿದ್ದಾಗ, ಕುಟುಂಬವು ರೇಷ್ಮಾಳ ಮೇಲೆ ಮತ್ತೆ ಕಿರುಕುಳ ನೀಡಲು ಹೆಚ್ಚಿಸಿತ್ತು.

ಸೆಪ್ಟೆಂಬರ್ 18 ರಂದು, ರೇಷ್ಮಾಳನ್ನು ಕೋಣೆಯೊಳಗೆ ಕೂಡಿಹಾಕಲಾಯಿತು. ತಡರಾತ್ರಿಯಲ್ಲಿ, ಕೋಣೆಯೊಳಗೆ ಹಾವನ್ನು ಬಿಟ್ಟು, ಆಕೆಯ ಕಾಲಿಗೆ ಕಚ್ಚುವಂತೆ ಮಾಡಲಾಯಿತು ಎಂದು ರೇಷ್ಮಾಳ ಸಹೋದರಿ ರಿಜ್ವಾನಾ ಆರೋಪಿಸಿದ್ದಾರೆ. ಹಾವಿನ ಕಡಿತದಿಂದ ರೇಷ್ಮಾಳ ಸ್ಥಿತಿ ಗಂಭೀರವಾಯಿತು. ಆದರೆ, ಶಹನವಾಜ್‌ನ ಕುಟುಂಬವು ಆಕೆಗೆ ಯಾವುದೇ ಸಹಾಯ ಮಾಡದೆ ನಿರ್ಲಕ್ಷ್ಯ ತೋರಿದರು. ರೇಷ್ಮಾ, ತನ್ನ ಸಹೋದರಿಯಾದ ರಿಜ್ವಾನಾಳನ್ನು ಫೋನ್ ಮೂಲಕ ಸಂಪರ್ಕಿಸುವಲ್ಲಿ ಯಶಸ್ವಿಯಾದಳು. ರಿಜ್ವಾನಾ ಸ್ಥಳಕ್ಕೆ ಧಾವಿಸಿ ಬಂದಾಗ, ರೇಷ್ಮಾ ಗಂಭೀರ ಸ್ಥಿತಿಯಲ್ಲಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ದಾಖಲಿಸಲಾಯಿತು.

ರಿಜ್ವಾನಾಳ ದೂರಿನ ಆಧಾರದ ಮೇಲೆ, ಕಾಲ್ಪುರ ಪೊಲೀಸರು ಶಹನವಾಜ್, ಅವನ ಪೋಷಕರು, ಅಣ್ಣ, ಸಹೋದರಿ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Exit mobile version