ಚೆನ್ನೈ: ನಟಿ ತ್ರಿಶಾ ಕುರಿತು ದ್ವಂದ್ವಾರ್ಥದ ಹೇಳಿಕೆ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಬಂಧನವಾದ ಕೆಲವೇ ಗಂಟೆಗಳಲ್ಲಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆಯಾಗಿದ್ದಾರೆ. ಬೆಳಿಗ್ಗೆ ಬಂಧನಕ್ಕೊಳಗಾಗಿದ್ದ ಅವರನ್ನು ಹೆಚ್ಚಿನ ವಿಚಾರಣೆಗಾಗಿ ತಂಜಾವೂರಿಗೆ ಕರೆದೊಯ್ಯಲಾಗಿತ್ತು. ಬಂಧನವಾದ 4 ಗಂಟೆಯ ಬಳಿಕ ಮದ್ರಾಸ್ ಹೈಕೋರ್ಟ್ ಆದೇಶದ ಮೇರೆಗೆ ಅವರನ್ನು ಬಿಡುಗಡೆ ಮಾಡಲಾಗಿದೆ.
ವಿವಾದದ ಹಿನ್ನೆಲೆ
ಸೋಮವಾರ ತಂಜಾವೂರಿನಲ್ಲಿ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಉದಯನಿಧಿ ಸ್ಟಾಲಿನ್, ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. “ತಮಿಳುನಾಡಿಗೆ ಕಾವೇರಿ ನೀರಿನ ಒಂದು ಹನಿಯೂ ಸಿಗದಿದ್ದರೂ ಮುಖ್ಯಮಂತ್ರಿ ಜಾರಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದ್ದರು.
ಈ ವೇಳೆ ಸಭೆಯಲ್ಲಿದ್ದ ಯಾರೋ ಒಬ್ಬರು “ತ್ರಿಶಾ, ತ್ರಿಶಾ” ಎಂದು ಘೋಷಣೆ ಕೂಗಿದರು. ಆಗ ತಮ್ಮ ಭಾಷಣವನ್ನು ನಿಲ್ಲಿಸಿದ ಉದಯನಿಧಿ, “ಎಲ್ಲಿಗೆ ನೀರು ಹರಿಯಬೇಕೋ ಅಲ್ಲಿಗೆ ಹರಿಯಬೇಕು, ನಾನು ಕಾವೇರಿ ಕುರಿತು ಹೇಳಿದ್ದು” ಎಂದು ನಟಿ ತ್ರಿಶಾ ಕುರಿತು ಪರೋಕ್ಷವಾಗಿ ದ್ವಂದ್ವಾರ್ಥದ ಹೇಳಿಕೆ ನೀಡಿದ್ದರು. ಈ ಮಾತುಗಳು ವ್ಯಾಪಕ ರಾಜಕೀಯ ಆಕ್ರೋಶಕ್ಕೆ ಕಾರಣವಾದವು.
ಬಂಧನ ಮತ್ತು ವಿಚಾರಣೆ
ಮುಖ್ಯಮಂತ್ರಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಸ್ಥಳೀಯ ಪೊಲೀಸರು ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ಉದಯನಿಧಿ ವಿರುದ್ಧ ದೂರು ನೀಡಿದ ನಂತರ ಈ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದರ ಹಿನ್ನೆಲೆ ಇಂದು ಬೆಳಿಗ್ಗೆ ಪೊಲೀಸರು ಉದಯನಿಧಿ ಅವರ ನಿವಾಸಕ್ಕೆ ತಲುಪಿ ಬಂಧಿಸಿದರು.
ಬಂಧನದ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಉದಯನಿಧಿ, “ನಾನು ಮುಖ್ಯಮಂತ್ರಿಯವರ ಹೆಸರನ್ನು ಹೊರತುಪಡಿಸಿ ಬೇರೆ ಯಾರ ಹೆಸರನ್ನಾದರೂ ಹೇಳಿದ್ದೇನಾ? ಹಾಗಿದ್ದರೂ ಏಕೆ ನನ್ನನ್ನು ಬಂಧಿಸುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ನ್ಯಾಯಾಲಯವೇ ಸತ್ಯವೇನೆಂದು ತೀರ್ಮಾನಿಸಲಿ” ಎಂದು ಹೇಳಿದರು.
ಹೈಕೋರ್ಟ್ ಮಧ್ಯಸ್ಥಿಕೆ
ಉದಯನಿಧಿ ಬಂಧನದ ತಕ್ಷಣವೇ ಅವರ ಕಾನೂನು ತಂಡವು ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತು. ವಿಚಾರಣೆಯ ಸಂದರ್ಭದಲ್ಲಿ ತಮಿಳುನಾಡು ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಅವರು ಉದಯನಿಧಿ ಅವರನ್ನು ಈಗಾಗಲೇ ಬಂಧಿಸಿ ವಿಚಾರಣೆಗಾಗಿ ತಂಜಾವೂರಿಗೆ ಕರೆದೊಯ್ಯಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
“ಪೋಲಿಸರಿಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಪಡೆಯುವ ಇಚ್ಛೆಯಿಲ್ಲ, ಕೇವಲ ವಿಚಾರಣೆ ನಡೆಸುವುದು ಮಾತ್ರವೇ ಉದ್ದೇಶವಾಗಿದೆ” ಎಂದು ವಿಜಯ್ ನೇತೃತ್ವದ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ಈ ವಾದವನ್ನು ಸ್ವೀಕರಿಸಿದ ಹೈಕೋರ್ಟ್, ವಿಚಾರಣೆ ನಡೆಸಿದ ತಕ್ಷಣವೇ ಅವರನ್ನು ಅದೇ ದಿನ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಆದೇಶಿಸಿತು.
ಪ್ರಕರಣದ ವಿವರ
ಉದಯನಿಧಿ ವಿರುದ್ಧ ಅಶ್ಲೀಲ ಪದಗಳ ಬಳಕೆ ಮತ್ತು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದ್ವೇಷವನ್ನು ಪ್ರಚೋದಿಸುವುದು, ಗಲಭೆ ಎಬ್ಬಿಸುವ ಉದ್ದೇಶದಿಂದ ಉದ್ರೇಕಿಸುವುದು ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಒಟ್ಟು 9 ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಾಗಿದೆ. ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯ ನಿಬಂಧನೆಗಳನ್ನೂ ಅನ್ವಯಿಸಲಾಗಿದೆ.
ಡಿಎಂಕೆ ಪ್ರತಿಭಟನೆ
ಉದಯನಿಧಿ ಬಂಧನವನ್ನು ಖಂಡಿಸಿ ಡಿಎಂಕೆ ಕಾರ್ಯಕರ್ತರು ತಮಿಳುನಾಡಿನಾದ್ಯಂತ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು. ಬಂಧನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಅವರು, ಇದು ರಾಜಕೀಯ ಪ್ರೇರಿತ ಬಂಧನವೆಂದು ಆರೋಪಿಸಿದ್ದರು. ಆದರೆ, ಹೈಕೋರ್ಟ್ ಆದೇಶದ ಬಳಿಕ ಬಿಡುಗಡೆಯಾದ ಹಿನ್ನೆಲೆ ಡಿಎಂಕೆ ವರ್ಗಗಳು ಸಮಾಧಾನ ವ್ಯಕ್ತಪಡಿಸಿವೆ.
